ಬುಕ್ಕಸಾಗರದ ಐತಿಹಾಸಿಕ ಏಳು ಹೆಡೆ ನಾಗಪ್ಪ ದೇಗುಲದಲ್ಲಿ ಹೂವಿನ ವಿಶೇಷ ಅಲಂಕಾರ ಮಾಡಿರುವುದು. 
ವಿಜಯನಗರ

ಜಿಲ್ಲೆಯಾದ್ಯಂತ ನಾಗರ ಚೌತಿ ಸಡಗರ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಬುಕ್ಕಸಾಗರದ ಏಳು ಹೆಡೆ ನಾಗಪ್ಪನಿಗೆ ಕ್ಷೀರಾಭಿಷೇಕ, ಭಕ್ತ ಸಾಗರ
ಹೊಸಪೇಟೆ: ವಿಜಯನಗರ ಜಿಲ್ಲೆಯಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಚೌತಿಯನ್ನು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿAದ ಭಾನುವಾರ ಆಚರಿಸಲಾಯಿತು.
ಮುಂಜಾನೆಯಿAದಲೇ ಮನೆ-ಮನಗಳಲ್ಲಿ, ಪ್ರಮುಖ ನಾಗದೇಗುಲಗಳಲ್ಲಿ ಹಾಗೂ ಹುತ್ತಗಳ ಬಳಿ ಧಾರ್ಮಿಕ ವಿಧಿವಿಧಾನಗಳು ಕಳೆಗಟ್ಟಿದ್ದವು. ತಾಲೂಕಿನ ಬುಕ್ಕಸಾಗರದ ಐತಿಹಾಸಿಕ ಏಳು ಹೆಡೆ ನಾಗಪ್ಪ ದೇಗುಲದಲ್ಲಿ ಹಬ್ಬದ ನಿಮಿತ್ತ ಭಕ್ತಸಾಗರವೇ ಹರಿದುಬಂದಿತ್ತು. ಬೆಳಗಿನ ಜಾವದಿಂದಲೇ ಮೂಲ ನಾಗಪ್ಪನ ಮೂರ್ತಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ಹಾಗೂ ಪುಷ್ಪಾಲಂಕಾರ ನೆರವೇರಿಸಲಾಯಿತು.
ನಗರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಆಗಮಿಸಿದ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ದರ್ಶನ ಪಡೆದರು. ನಾಗಪ್ಪನಿಗೆ ಹಾಲು, ತುಪ್ಪ, ಅರಿಶಿನ, ಕುಂಕುಮ, ತಂಬಿಟ್ಟು ಹಾಗೂ ಅರಳು ನೈವೇದ್ಯ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಭಕ್ತರ ಜನದಟ್ಟಣೆಯನ್ನು ನಿಯಂತ್ರಿಸಲು ದೇಗುಲ ಸಮಿತಿಯಿಂದ ವಿಶೇಷ ಬ್ಯಾರಿಕೇಡ್ ಹಾಗೂ ಸುಗಮ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾರ್ವಜನಿಕರಿಗೆ ನಿರಂತರ ಅನ್ನಪ್ರಸಾದ ವಿನಿಯೋಗ ನಡೆಯಿತು. ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಸಂಪೂರ್ಣ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲೆಯ ವಿವಿಧೆಡೆ ನಾಗರಕಟ್ಟೆಗಳು, ದೇಗುಲಗಳ ಆವರಣದಲ್ಲಿರುವ ನಾಗಶಿಲೆಗಳು ಮತ್ತು ನೈಸರ್ಗಿಕ ಹುತ್ತಗಳಿಗೆ ಮಹಿಳೆಯರು ಕುಟುಂಬ ಸಮೇತರಾಗಿ ತೆರಳಿ ಹಾಲೆರೆದರು. ಸಹೋದರರ ಒಳಿತಿಗಾಗಿ ಹಾಗೂ ಕೃಷಿ ಸಮೃದ್ಧಿಗಾಗಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಮನೆ-ಮನೆಗಳಲ್ಲೂ ನಾಗರ ಪ್ರತಿಮೆಗಳಿಗೆ ಅರಿಶಿನ, ಕುಂಕುಮ, ಗೆಜ್ಜೆವಸ್ತ್ರ ಸಮರ್ಪಿಸಿ ಪೂಜಿಸಲಾಯಿತು. ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ವ್ಯಾಪಾರ ಬಿರುಸಿನಿಂದ ಕೂಡಿತ್ತು. ಜಿಲ್ಲೆಯಾದ್ಯಂತ ನಾಗರ ಚೌತಿ ಆಚರಣೆಯು ಶಾಂತಿಯುತ ಹಾಗೂ ಅತ್ಯಂತ ವೈಭವಯುತವಾಗಿ ಸಂಪನ್ನಗೊAಡಿತು.