ಆಗಿ ಹುಣ್ಣಿಮೆ ಅಂಗವಾಗಿ ಮೈಲಾರ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನವಧಾನ್ಯಗಳನ್ನು ಬೆಳೆದಿರುವುದು.
ಹೂವಿನಹಡಗಲಿ: ಆಗಿ ಹುಣ್ಣಿಮೆ ಅಂಗವಾಗಿ ಮೈಲಾರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಕಲ್ಯಾಣೋತ್ಸವ ಗುರುವಾರ ಸಂಭ್ರಮದಿಂದ ನಡೆಯಿತು.
ಶ್ರೀ ಮೈಲಾರಲಿಂಗೇಶ್ವರಸ್ವಾಮಿ, ಗಂಗಿಮಾಳಮ್ಮ ದೇವಿಗೆ ಮಂಗಳವಾರ ಮಾಂಗಲ್ಯಧಾರಣೆ ಮಾಡುವ ಮೂಲಕ ಕಲ್ಯಾಣೋತ್ಸವ ಆರಂಭವಾಯಿತು. ಅಂದಿನಿಂದ ಹುಣ್ಣಿಮೆವರೆಗೆ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಜರುಗಿದವು. ಹುಣ್ಣಿಮೆಯ 5 ದಿನದ ಪೂರ್ವದಲ್ಲಿ ನವಧಾನ್ಯಗಳನ್ನು ದೇವಸ್ಥಾನದ ಆವರಣದಲ್ಲಿ ಬಿತ್ತನೆ ಮಾಡಲಾಯಿತು. ಹುಣ್ಣಿಮೆ ದಿನ ಯಾವ ಧಾನ್ಯ ಹೆಚ್ಚು ಫಸಲು ನೀಡಲಿದೆ ಎಂಬುದನ್ನು ಗಮನಿಸಿ ಭಕ್ತರು ಜಮೀನಿನಲ್ಲಿ ಅದೇ ಧಾನ್ಯ ಬಿತ್ತನೆ ಮಾಡುತ್ತಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಫಸಲು ಬರಲಿದೆ ಎಂಬ ನಂಬಿಕೆ ಇದೆ.
ಕಲ್ಯಾಣೋತ್ಸವ ಅಂಗವಾಗಿ ನವದಂಪತಿ ಕಲ್ಯಾಣದ ಮೆರವಣಿಗೆ ಗುರುವಾರ ರಾತ್ರಿ ರಥೋತ್ಸವದೊಂದಿಗೆ ಜರುಗಿತು. ರಥೋತ್ಸವಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತ ಸಮೂಹ ಹರಕೆಯನ್ನು ತೀರಿಸಿತು. ಶನಿವಾರ ತುಂಗಭದ್ರಾ ನದಿಗೆ ತೆರಳುವ ಮೂಲಕ ಕಂಕಣ ವಿಸರ್ಜನೆ, ಸಂಜೆ ದೇವಸ್ಥಾನದ ಆವರಣದಲ್ಲಿ ಸರಪಳಿ ಪವಾಡ ಹಾಗೂ ಇತರ ಕಾರ್ಯಕ್ರಮ ನಡೆಯಲಿವೆ.