ಹರಪನಹಳ್ಳಿ ನಮೋ ಭವನದಲ್ಲಿ ಜನಸಂಘದ ಸಂಸ್ಥಾಪಕ ಶ್ಯಾಮಾಪ್ರಸಾದ್ ಮುಖರ್ಜಿ ಜನ್ಮದಿನ ಆಚರಿಸಲಾಯಿತು.
ಹರಪನಹಳ್ಳಿ: ದೇಶದಲ್ಲಿ ದುಷ್ಟ ಶಕ್ತಿಗಳಿಂದ ದೇಶ ವಿಭಜಿಸುವ ಹುನ್ನಾರ ನಡೆದಾಗ ಅದನ್ನು ಪ್ರಬಲವಾಗಿ ವಿರೋಧಿಸುವ ಮೂಲಕ ಶ್ಯಾಮಾಪ್ರಸಾದ್ ಮುಖರ್ಜಿ ದೇಶಾಭಿಮಾನ ಮೆರೆದರು ಎಂದು ಬಿಜೆಪಿ ಮುಖಂಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಹೇಳಿದರು.
ನಮೋ ಭವನದಲ್ಲಿ ಆಯೋಜಿಸಿದ್ದ ಶ್ಯಾಮಾಪ್ರಸಾದ್ ಮುಖರ್ಜಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಾಪ್ರಸಾದ್ ಮುಖರ್ಜಿ ವೃತ್ತಿಯಲ್ಲಿ ವಕೀಲರಾಗಿದ್ದು, ಸಮಾಜ ಸುಧಾರಣೆಗ ದಾರಿದೀಪವಾಗಿದ್ದರು. ಸ್ವಾತಂತ್ರೃ ನಂತರ ಹಿಂದೂಗಳ ಮೇಲಿನ ಶೋಷಣೆ ವಿರುದ್ಧ ಧ್ವನಿ ಎತ್ತಿದ್ದರು ಎಂದರು.
ಬಿಜೆಪಿ ಸಹಕಾರ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ಜೆ.ಓಂಕಾರಗೌಡ ಮಾತನಾಡಿ, ದೇಶದ ಏಕತೆ, ಅಖಂಡತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಶ್ಯಾಮಾಪ್ರಸಾದ್ ಮುಖರ್ಜಿ ಅವರ ಸೇವೆ ಸ್ಮರಣೀಯವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಸಾರ್ವಜನಿಕ ಬದುಕು ಇಂದಿನ ಪೀಳಿಗೆಗೆ ಮಾದರಿಯಾಗಿವೆ ಎಂದರು.