ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಶುಕ್ರವಾರ ಪೀರಲ ದೇವರ ಮೆರವಣಿಗೆ ನಡೆಯಿತು.
ಹೊಸಪೇಟೆ: ನಗರ ಸೇರಿದಂತೆ ಜಿಲ್ಲಾಧ್ಯಂತ ವಿವಿಧೆಡೆ ಕಳೆದ 11 ದಿನಗಳಿಂದ ಸಡಗರ-ಸಂಭ್ರಮದಿAದ ಆಚರಿಸಲ್ಪಡುತ್ತಿದ್ದ ಮೊಹರಂ ಹಬ್ಬಕ್ಕೆ ಶುಕ್ರವಾರ ಪೀರಲ ದೇವರುಗಳನ್ನು ಕರ್ಬಲ್‌ಗೆ ಕಳುಹಿಸಿಕೊಡುವ ಮೂಲಕ ಭಕ್ತಿಪೂರ್ವಕ ತೆರೆ ಎಳೆಯಲಾಯಿತು. ಭಾವೈಕ್ಯತೆಯ ಸಂಕೇತವಾಗಿರುವ ಈ ಹಬ್ಬದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಒಟ್ಟಾಗಿ ಪಾಲ್ಗೊಂಡು ಕೋಮುಸೌಹಾರ್ದತೆ ಮೆರೆದರು.
ಹಬ್ಬದ ಕೊನೆಯ ದಿನವಾದ ಗುರುವಾರ ರಾತ್ರಿ ಸಾರ್ವಜನಿಕರು ಪೀರಲ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಅಲಾಯಿ ಕುಣಿಗೆ ಉಪ್ಪು ಹಾಗೂ ದಾರವನ್ನು ಸಮರ್ಪಿಸಿ ತಮ್ಮ ಹರಕೆಗಳನ್ನು ತೀರಿಸಿಕೊಂಡರು. ಇನ್ನು ಗುರುವಾರ ಮುಂಜಾನೆ 3.30ರ ಸುಮಾರಿಗೆ ಪೀರಲ ದೇವರುಗಳು ಧಗಧಗಿಸುವ ಕೆಂಡದ ಅರ್ಚನೆ (ಅಗ್ನಿ ಪ್ರವೇಶ) ಮಾಡುವ ಮೂಲಕ ಪವಾಡ ಸದೃಶ್ಯ ದೃಶ್ಯಗಳಿಗೆ ಸಾಕ್ಷಿಯಾದವು.
ನಂತರ ಬೆಳಗಿನ ಜಾವ 6 ಗಂಟೆಯವರೆಗೆ ಜರುಗಿದ ಭವ್ಯ ಮೆರವಣಿಗೆಯಲ್ಲಿ ದೇವರುಗಳು ಮುಖಾಮುಖಿಯಾದವು. ಶುಕ್ರವಾರ ಸಂಜೆ 4 ರಿಂದ 6 ಗಂಟೆಯವರೆಗೆ ಹಬ್ಬದ ಪ್ರಮುಖ ಆಕರ್ಷಣೆಯಾದ ಪೀರಲ ದೇವರುಗಳ ‘ಮಿಲನ’ ಕಾರ್ಯಕ್ರಮ ಅತ್ಯಂತ ವೈಭವದಿಂದ ಜರುಗಿತು. ಈ ಅಪರೂಪದ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಪಟ್ಟಣದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನಸ್ತೋಮವೇ ನೆರೆದಿತ್ತು. ಅಂತಿಮವಾಗಿ ಸಂಪ್ರದಾಯದAತೆ ದೇವರುಗಳನ್ನು ಕರ್ಬಲ್ ಮಾಡುವುದರೊಂದಿಗೆ ಮೊಹರಂ ಆಚರಣೆ ಮುಕ್ತಾಯಗೊಂಡಿತು.