ಹಂಪಿಯಲ್ಲಿ ನೀರುಪಾಲಾದ ತಾಯಿ-ಮಗಳಿಗಾಗಿ ಶೋಧ ಕಾರ್ಯ ನಡೆಯಿತು. 
ವಿಜಯನಗರ

ಹಂಪಿಯಲ್ಲಿ ತಾಯಿ ಮಗಳು ನೀರುಪಾಲು

ಪ್ರಮುಖ ಮುಖ್ಯಾಂಶಗಳು

  • ತುಂಗಭದ್ರಾ ನದಿಯಲ್ಲಿ ಘಟನೆ
  • ಶೋಧಕಾರ್ಯ ತೀವ್ರ
ಹೊಸಪೇಟೆ: ಐತಿಹಾಸಿಕ ತಾಣ ಹಂಪಿಗೆ ಪ್ರವಾಸಕ್ಕೆಂದು ಬಂದಿದ್ದ ತಾಯಿ ಹಾಗೂ ಮಗಳು ತುಂಗಭದ್ರಾ ನದಿಯಲ್ಲಿ ಕಾಲುಜಾರಿ ಬಿದ್ದು ನಾಪತ್ತೆಯಾಗಿರುವ ದಾರುಣ ಘಟನೆ ಶನಿವಾರ ನಡೆದಿದೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಸೂಳೆಕೆರೆ ಗ್ರಾಮದ ನಿವಾಸಿಗಳಾದ ಶಾಹೀನ್ (38) ಹಾಗೂ ಅವರ ಪುತ್ರಿ ಯಾಸ್ಮೀನ್ (13) ನದಿಯಲ್ಲಿ ಕೊಚ್ಚಿಹೋದ ದುರ್ದೈವಿಗಳು. ಸಂಬಂಧಿಕರೊಂದಿಗೆ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಕುಟುಂಬಸ್ಥರು, ಊಟ ಸಿದ್ಧಪಡಿಸಿದ ನಂತರ ತುಂಗಭದ್ರಾ ನದಿಯ ಸ್ನಾನಘಟ್ಟದಲ್ಲಿ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರೂ ಕಣ್ಮರೆಯಾಗಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದವರು ರಕ್ಷಣೆಗೆ ಮುಂದಾದರೂ ನೀರಿನ ಹರಿವು ಹೆಚ್ಚಿದ್ದರಿಂದ ಸಾಧ್ಯವಾಗಲಿಲ್ಲ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹಂಪಿ ಪ್ರವಾಸಿ ಠಾಣೆಯ ಪೊಲೀಸರು ಹಾಗೂ ಸ್ಥಳೀಯ ಮುಳುಗು ತಜ್ಞರು ನದಿಯಲ್ಲಿ ತಾಯಿ-ಮಗಳ ಪತ್ತೆಗಾಗಿ ತೀವ್ರ ಶೋಧಕಾರ್ಯ ಕೈಗೊಂಡಿದ್ದಾರೆ. ಪ್ರವಾಸದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈ ಘಟನೆಯಿಂದಾಗಿ ಆಕ್ರಂದನ ಮುಗಿಲುಮುಟ್ಟಿದೆ. ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.