ಹರಪನಹಳ್ಳಿಯಲ್ಲಿ ಕಲ್ಲು ಗಣಿಗಾರಿಕೆಗಾಗಿ ಡೈನಾಮೈಟ್ ಸ್ಫೋಟ ಮಾಡಿದ ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದರು.  
ವಿಜಯನಗರ

ಡೈನಾಮೈಟ್ ಸ್ಫೋಟದಿಂದ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಅಶೋಕ್ ಕುಮಾರ್ ಎನ್
ಹರಪನಹಳ್ಳಿ: ನಗರದ ವಿದ್ಯಾಗಿರಿ ಅಶೋಕ ಬಡಾವಣೆ ಸಮೀಪದ ಈದ್ಗಾ ಮೈದಾನದಲ್ಲಿ ಮಂಗಳವಾರ ಕಲ್ಲು ಗಣಿಗಾರಿಕೆ ವೇಳೆ ಡೈನಾಮೈಟ್ ಸ್ಫೋಟದಿಂದ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಇದರಿಂದಾಗಿ ನಿವಾಸಿಗಳು ಭಯಭೀತರಾಗಿದ್ದಾರೆ.
ಘಟನೆಗೆ ಸಂಬಂದಿಸಿದಂತೆ ಶಹಬಾದ್ ಮತ್ತು ಅನ್ನುಸಾಬ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರವಾನಗಿ ಪಡೆಯದೆ ಗಣಿಗಾರಿಕೆ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ. ನಗರಸಭೆ ಹಾಗೂ ವಕ್ಫ್ ಬೋರ್ಡ್ ಜಾಗದಲ್ಲಿ ಘಟನೆ ನಡೆದಿದೆ. ಏಕಾಏಕಿ ಕೇಳಿಬಂದ ಭೀಕರ ಸ್ಫೋಟದ ಸದ್ದಿಗೆ ಸುತ್ತಲಿನ ಪ್ರದೇಶದ ಮನೆಗಳಲ್ಲಿ ಭಾರಿ ಕಂಪನ ಉಂಟಾದ ಪರಿಣಾಮ ಜನರು ಭೂಕಂಪವಾಗಿದೆ ಎಂದು ತಿಳಿದು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.