ಹೊಸಪೇಟೆ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯನ್ನು ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಉದ್ಘಾಟಿಸಿ ಅವರು ಮಾತನಾಡಿದರು. ಲೋಕಾಯುಕ್ತ ಉಪನಿಬಂಧಕ ಎನ್.ವಿ. ಅರವಿಂದ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ, ಜಿ.ಪಂ. ಸಿಇಒ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಷಾ, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಸಂಘದ ರಾಜ್ಯ ಸಮಿತಿ ಸದಸ್ಯ ಪಿ.ವೆಂಕೊಬನಾಯಕ, ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಕೆ.ಲಕ್ಷ್ಮಣ ಇತರರಿದ್ದರು.
- ಪತ್ರಿಕಾ ದಿನಾಚರಣೆಯಲ್ಲಿ ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ಕರೆ
ಹೊಸಪೇಟೆ: ಪತ್ರಕರ್ತರು ತಮ್ಮ ವೃತ್ತಿಧರ್ಮ, ಸತ್ಯಸಂಧತೆ, ನಿಷ್ಪಕ್ಷಪಾತತನ ಹಾಗೂ ಧೈರ್ಯದಿಂದ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಆಮಿಷಗಳಿಗೆ ಬಲಿಯಾಗದೆ, ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ಕರೆ ನೀಡಿದರು.
ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಕಂಬವಾಗಿದ್ದು, ಸಮಾಜಕ್ಕೆ ಮುಖಪುಟದಂತಿದೆ. ನೀವು ಹಿಡಿಯುವ ಲೋಗೋ ತುಪಾಕಿಯಂತೆ ಹಾಗೂ ಕೈಯಲ್ಲಿರುವ ಲೇಖನಿ ಸತ್ಯವನ್ನು ಬಿಚ್ಚಿಡುವ ಕತ್ತಿಯಂತೆ ಕೆಲಸ ಮಾಡಬೇಕು. ಅಧಿಕಾರಸ್ಥರು ನಿಮ್ಮ ಲೇಖನಿಗೆ ಹೆದರಬೇಕೇ ಹೊರತು, ನೀವು ಯಾರ ಒತ್ತಡಕ್ಕೂ ಮಣಿಯಬಾರದು ಎಂದರು.
ಮಾಧ್ಯಮ ದುರ್ಬಳಕೆ ಮತ್ತು ಬ್ಲ್ಯಾಕ್‌ಮೇಲ್ ತಂತ್ರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, "ಲೋಕಾಯುಕ್ತ ಕಾಯ್ದೆಯಡಿ ಸ್ವಾರ್ಥ ಹಾಗೂ ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ದೂರು ಅಥವಾ ಮಾಹಿತಿ ನೀಡಿದರೆ 3 ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರರೂ. ದಂಡ ವಿಧಿಸಲು ಅವಕಾಶವಿದೆ. ಸ್ವಾಭಿಮಾನ ಮಾರಿಕೊಳ್ಳದೆ, ಸತ್ಯದ ಪರವಾಗಿ ನಿಲ್ಲಿ. ಪ್ರತಿದಿನ ಸಂಜೆ ಕನಿಷ್ಠ 10 ನಿಮಿಷ ದೇಶಭಕ್ತಿ ಹಾಗೂ ಸೈನಿಕರ ಸಾಹಸಗಾಥೆಗಳನ್ನು ಪ್ರಸಾರ ಮಾಡಿ ಎಂದು ಯುವ ಪತ್ರಕರ್ತರಿಗೆ ಸಲಹೆ ನೀಡಿದರು.
ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.