ಭುವನಹಳ್ಳಿ ಬಳಿ ಮಂಗಳವಾರ ರಾತ್ರಿ ಅಪಘತದಲ್ಲಿ ಸಾವನ್ನಪ್ಪಿದ ಕರಡಿಯನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಭಾಸ್ಕರ್ ಪರಿಶೀಲನೆ ನಡೆಸಿದರು. ಆರ್‌ಎಫ್‌ಒ ಕೌಶಿಕ್, ಪಶು ವೈದ್ಯಾಧಿಕಾರಿ ಸತೀಶ್, ಉಪ ಅರಣ್ಯ ವಲಯಾಧಿಕಾರಿ ವೀರೇಶ್ ಮಾಶೇಟ್ಟಿ, ಗಸ್ತು ಅರಣ್ಯಪಾಲಕರಾದ ಕೆ.ವೀರೇಶ್, ರವಿಚಂದ್ರ ಇತರರಿದ್ದರು.
ಹೊಸಪೇಟೆ: ತಾಲೂಕಿನ ಭುವನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಮಂಗಳವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಂದಾಜು ಎಂಟು ವರ್ಷದ ಗಂಡು ಕರಡಿ ಸಾವನ್ನಪ್ಪಿದೆ.
ತಾಲೂಕಿನ ಗಾದಿಗನೂರಿನಿಂದ ಭುವನಹಳ್ಳಿಗೆ ತೆರಳುವ ರಸ್ತೆಯಲ್ಲಿ ವಾಹನ ಡಿಕ್ಕಿ ಹೊಡೆದುದರಿಂದ ಕರಡಿಯ ಬಲಭಾಗದ ಎದೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಸತ್ತುಹೋಗಿದೆ. ಬುಧವಾರ ಮರಣೋತ್ತರ ಪರೀಕ್ಷೆ ನಡೆದ ಬಳಿಕ ನ್ಯಾಯಾಲಯದ ಸೂಚನೆಯಂತೆ ಅರಣ್ಯ ಪ್ರದೇಶದಲ್ಲಿ ಸತ್ತ ಕರಡಿಯ ಕಳೇಬರವನ್ನು ಸುಡಲಾಯಿತು ಎಂದು ವಲಯ ಅರಣ್ಯ ಅಧಿಕಾರಿ ಕೌಶಿಕ್ ದಳವಾಯಿ ತಿಳಿಸಿದರು.