ಹೊಸಪೇಟೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ವಿವಿಧ ದೇಗುಲಗಳ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಸಿದರು. ಜಿಪಂ ಸಿಇಒ ನೊಂಗ್ಜಾಯ್ ಮಹ್ಮದ್ ಅಲಿ ಅಕ್ರಮ್ ಷಾ, ಎಸ್ಪಿ ಎಸ್.ಜಾಹ್ನವಿ ಇದ್ದರು.
- ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ
- ಮಾ.27 ರಿಂದ ಏಪ್ರಿಲ್ 4ರವರೆಗೆ ವಿವಿಧ ಜಾತ್ರೆ ರಥೋತ್ಸವ
ಹೊಸಪೇಟೆ: ಮುಂಬರುವ ಮಾ.27 ರಿಂದ ಏ.04 ರವರೆಗೆ ಶ್ರೀ ಹಂಪಿ ವಿರೂಪಾಕ್ಷೇಶ್ವರ ರಥೋತ್ಸವ ಸೇರಿದಂತೆ ವಿವಿಧ ದೇಗುಲಗಳ ಜಾತ್ರೆ ಹಾಗೂ ರಥೋತ್ಸವಗಳು ಜರುಗಲಿದ್ದು ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ವಿವಿಧ ದೇಗುಲಗಳ ವಾರ್ಷಿಕ ಜಾತ್ರಾ ಮಹೋತ್ಸವ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಮಾ.27 ರಂದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಮತ್ತು ಆಂಜನೇಯ ಸ್ವಾಮಿ ದೇಗುಲದ ವಾರ್ಷಿಕ ರಥೋತ್ಸವ ಜರುಗಲಿದೆ. ಮಾ.27 ರಿಂದ ಏ.4 ವರೆಗೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಬ್ರಹ್ಮರಥೋತ್ಸವ ಹಾಗೂ ಮಾ.31ರವರೆಗೆ ನಗರದ ಹೊರವಲಯದ ಶ್ರೀ ಜಂಬುನಾಥೇಶ್ವರ ದೇಗುಲದ ವಾರ್ಷಿಕ ರಥೋತ್ಸವ ನಡೆಯಲಿದೆ ಎಂದರು.
ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುವುದರಿಂದ, ಯಾವುದೇ ಸಣ್ಣ ಲೋಪ ದೋಷಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬಿಸಿಲಿನ ತಾಪ ಗಮನದಲ್ಲಿಟ್ಟುಕೊಂಡು ಕುಡಿವ ನೀರು, ನೆರಳಿನ ವ್ಯವಸ್ಥೆ, ಶೌಚಗೃಹ, ರಾತ್ರಿ ವೇಳೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಬೀದಿ ದೀಪ ಅಳವಡಿಸಿ ಬೆಳಕಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳ ಒದಗಿಸಬೇಕು. ವೈದ್ಯಕೀಯ ಇಲಾಖೆಯಿಂದ ತುರ್ತು ವೈದ್ಯಕೀಯ ಸೇವೆಗಳಲ್ಲಿ ಕೊರತೆಯಾಗದಂತೆ ಕ್ರಮವಹಿಸಿ ಎಂದರು.
ಸುರಕ್ಷತೆಯ ದೃಷ್ಟಿಯಿಂದ ಈ ಬಾರಿ ಭದ್ರತೆಯನ್ನು ಹೆಚ್ಚಿಸಲಾಗುವುದು. ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಸಬೇಕು. ತಾತ್ಕಾಲಿಕ ಪೊಲೀಸ್ ನಿಯಂತ್ರಣ ಕೊಠಡಿ ಸ್ಥಾಪಿಸಬೇಕು. ರಥ ಸಂಚರಿಸುವ ಬೀದಿಗಳಲ್ಲಿನ ಗೂಡಂಗಡಿಗಳ ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಕ್ರಮವಹಿಸಿ. ಜಂಬುನಾಥೇಶ್ವರ ದೇಗುಲ ಸಂಪರ್ಕ ಕಲ್ಪಿಸಲು ರಸ್ತೆ ಕಾಮಗಾರಿ ವಿವಿಧ ಕಾರಣಗಳಿಂದ ಅರ್ಧಕ್ಕೆ ಮೊಟಕಾಗಿದ್ದು, ತ್ವರಿತವಾಗಿ ಪೂರ್ಣಗೊಳಿಸಿ ಭಕ್ತಾಧಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.