ಹೊಸಪೇಟೆ ಶ್ರೀ ಉತ್ತರಾದಿ ಮಠದಲ್ಲಿ ಚಾತುರ್ಮಾಸ್ಯ ನಿಮಿತ್ತ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಗಳು ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿದರು. ಉತ್ತರಾದಿ ಮಠದ ದಿವಾನರಾದ ಶಶಿಧರಾಚಾರ್, ಹೊಸಪೇಟೆಯ ಉತ್ತರಾದಿ ಮಠದ ವ್ಯವಸ್ಥಾಪಕರಾದ ಶ್ರೀಕರಾಚಾರ್, , ಫಣಿಯಾಚಾರ್, ಹನುಮಂತಾಚಾರ್, ಅಖಿಲಾಚಾರ್, ವರದಾಚಾರ್ ಇತರರಿದ್ದರು. 
ವಿಜಯನಗರ

ಉತ್ತರಾದಿ ಮಠದಲ್ಲಿ ವೈಭವದ ಮುದ್ರಾಧಾರಣೆ ಮಹೋತ್ಸವ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಭಕ್ತರಿಗೆ ಮಂತ್ರಾಕ್ಷತೆ ನೀಡಿದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ
ಹೊಸಪೇಟೆ: ನಗರದ ಸ್ಟೇಷನ್ ರಸ್ತೆಯಲ್ಲಿರುವ ಶ್ರೀ ಉತ್ತರಾದಿ ಮಠದಲ್ಲಿ ಚಾತುರ್ಮಾಸ್ಯ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಮುದ್ರಾಧಾರಣೆ ಮಹೋತ್ಸವವು ಮಂಗಳವಾರ ಜರುಗಿತು.
ಶ್ರೀ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಗಳು ಭಾಗವಹಿಸಿ, ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಶ್ರೀ ಮಠದ ಹಾಗೂ ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿದರು. ಈ ಪರ್ವಕಾಲದಲ್ಲಿ ಭಗವಂತನ ಪರಮ ಪವಿತ್ರ ಆಯುಧಗಳಾದ ಶಂಖ ಹಾಗೂ ಚಕ್ರಗಳ ಮುದ್ರೆಯನ್ನು ಭಕ್ತರ ದೇಹದ ಮೇಲೆ ಅಂಕಿತ ಮಾಡಲಾಯಿತು. ನಂತರ ಜಯತೀರ್ಥ, ಶ್ರೀ ರಾಘವೇಂದ್ರ ಹಾಗೂ ಶ್ರೀರಾಮ ದೇವರ ಪೂಜೆ ನೆರವೇರಿಸಿದರು. ಶ್ರೀ ಮಠದಲ್ಲಿ ಧಾರ್ಮಿಕ ಕೈಕರ್ಯಗಳು ನಡೆದವು.
ಇದೇ ವೇಳೆ ಶ್ರೀಮಠದ ವ್ಯವಸ್ಥಾಪಕ ರಾಮಾಚಾರಿ ಉಮಾರ್ಜಿ ಮಾತನಾಡಿ, ನಮ್ಮ ದೈನಂದಿನ ಜೀವನದಲ್ಲಿ ಕಾಯಿಕ, ವಾಚಿಕ ಮತ್ತು ಮಾನಸಿಕವಾಗಿ ತಿಳಿಯದೇ ಮಾಡುವ ಪಾಪಕರ್ಮಗಳ ನಿವಾರಣೆಗಾಗಿ ಮುದ್ರಾಧಾರಣೆ ಮಾಡಿಸಿಕೊಳ್ಳುವುದು ಅತ್ಯಂತ ಶ್ರೇಷ್ಠ. ಭಗವಂತನ ಸುದರ್ಶನ ಚಕ್ರವು ಕೋಟಿ ಸೂರ್ಯರ ತೇಜಸ್ಸನ್ನು ಹೊಂದಿದ್ದು, ದೇಹದ ಮೇಲೆ ಈ ದಿವ್ಯ ಚಿಹ್ನೆಗಳಿರುವುದರಿಂದ ಯಾವುದೇ ನಕಾರಾತ್ಮಕ ಶಕ್ತಿಗಳ ಭಯವಿರುವುದಿಲ್ಲ. ಇದು ದೇಹ ಹಾಗೂ ಮನಸ್ಸಿನ ಶುದ್ಧೀಕರಣಕ್ಕೆ ಸಹಕಾರಿ ಎಂದು ತಿಳಿಸಿದರು.
ಮುದ್ರಾಧಾರಣೆಯ ನಂತರ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಗಳು ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಚಾತುರ್ಮಾಸ್ಯದ ಈ ಪರ್ವಕಾಲದಲ್ಲಿ ಹಮ್ಮಿಕೊಳ್ಳಲಾದ ಮುದ್ರಾಧಾರಣೆ ಕಾರ್ಯಕ್ರಮದಲ್ಲಿ ನಗರ ಹಾಗೂ ಸುತ್ತಮುತ್ತಲಿನ ನೂರಾರು ಭಕ್ತರು ಶಿಸ್ತುಬದ್ಧವಾಗಿ ಸಾಲಿನಲ್ಲಿ ನಿಂತು ಮುದ್ರೆ ಧರಿಸಿ, ಗುರುಗಳ ಕೃಪೆಗೆ ಪಾತ್ರರಾದರು.