ಹೊಸಪೇಟೆ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಮಂಗಳವಾರ ನಡೆದ ಕಳವು ವಸ್ತುಗಳ ಪತ್ತೆ ಹಚ್ಚಿ ಸ್ವತ್ತನ್ನು ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ನಕಲಿ ಬಂಗಾರ ಪಡೆದು ವಂಚನೆಗೊಳಗಾದ ತಮಿಳುನಾಡಿನ ಮಧುರೈನ ಕುಮಾರ್ ಎಂಬುವರಿಗೆ 75 ಲಕ್ಷ ರೂ. ಬಳ್ಳಾರಿ ಐಜಿಪಿ ಪಿ.ಎಸ್.ಹರ್ಷ ವಾರಸುದಾರರಿಗೆ ಹಿಂದಿರುಗಿಸಿದರು. ಎಸ್ಪಿ ಎಸ್.ಜಾಹ್ನವಿ, ಎಎಸ್ಪಿ ಮಂಜುನಾಥ, ಹಿರೆಹಡಗಲಿ ಪಿಎಸ್ ಐ ಅಶೋಕ್ ಬೆವೂರು ಇತರರಿದ್ದರು.
- 150 ವಿವಿಧ ಪ್ರಕರಣಗಳನ್ನು ಭೇದಿಸಿ, 4.57 ಕೋಟಿ ರೂ. ಮೌಲ್ಯದ ಸ್ವತ್ತು ಜಪ್ತಿ
- ಪೊಲೀಸ್ ಇಲಾಖೆಯಿಂದ ವಾರಸುದಾರರಿಗೆ ಹಸ್ತಾಂತರ
ಹೊಸಪೇಟೆ: ಜಿಲ್ಲೆಯಲ್ಲಿ ಸಾರ್ವಜನಿಕರ ಹಿತರಕ್ಷಣೆ ಮತ್ತು ವಿಕ್ಟಿಮ್-ಸೆಂಟ್ರಿಕ್ (ಸಂತ್ರಸ್ತರ ಕೇಂದ್ರಿತ) ಪೊಲೀಸಿಂಗ್ ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದ್ದು, ವಿವಿಧ ಕಳುವು ಹಾಗೂ ವಂಚನೆ ಪ್ರಕರಣಗಳಲ್ಲಿ ಜಪ್ತಿ ಮಾಡಲಾಗಿದ್ದ 4.57 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಹಿಂತಿರುಗಿಸಲಾಗಿದೆ ಎಂದು ಬಳ್ಳಾರಿ ಐಜಿಪಿ ಪಿ.ಎಸ್.ಹರ್ಷ ತಿಳಿಸಿದರು.
ನಗರದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಮಂಗಳವಾರ ನಡೆದ ಕಳೆದ ಆರು ತಿಂಗಳಲ್ಲಿ ಕಳವು ವಸ್ತುಗಳ ಪತ್ತೆ ಹಚ್ಚಿ, ಸ್ವತ್ತನ್ನು ಹಿಂದಿರುಗಿಸುವ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಒಟ್ಟು 150 ವಿವಿಧ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಪ್ರಮುಖವಾಗಿ 1,477 ಕಳುವಾಗಿದ್ದ ಮೊಬೈಲ್ ಹ್ಯಾಂಡ್‌ಸೆಟ್‌ಗಳು, ಅಂದಾಜು 2 ಕೋಟಿ ರೂ. ಮೌಲ್ಯದ ಸುಮಾರು 2.34 ಕೆಜಿ ಬಂಗಾರದ ಆಭರಣಗಳು, 1.42 ಕೋಟಿ ರೂ. ನಗದು, 4 ನಾಲ್ಕು ಚಕ್ರದ ವಾಹನಗಳು, 83 ದ್ವಿಚಕ್ರ ವಾಹನಗಳು ಹಾಗೂ 9 ಜಾನುವಾರುಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಜತೆಗೆ, ಸೈಬರ್ ವಂಚನೆಗೊಳಗಾಗಿದ್ದ ಬಾಧಿತರಿಗೆ 5 ಲಕ್ಷ ರೂ. ವಾಪಸ್ ಕೊಡಿಸಲಾಗಿದೆ ಎಂದರು.
ನಗರದ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಎಚ್‌ಆರ್‌ಜಿ ಮನೆಯಲ್ಲಿದ್ದ ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ದೇಶ ಬಿಟ್ಟು ಓಡಿಹೋಗಲು ಯತ್ನಿಸುತ್ತಿದ್ದ ನೇಪಾಳಿ ಮೂಲದ ಕೆಲಸಗಾರನನ್ನು ಬಂಧಿಸಿ, ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇದಲ್ಲದೆ ನಗರದಲ್ಲಿ 8.50 ಲಕ್ಷ ಮೌಲ್ಯದ ಸ್ವತ್ತು, ಲಾರಿ ಬ್ಯಾಟರಿ ಕಳ್ಳತನದ ಗ್ಯಾಂಗ್, ವಿದ್ಯುತ್ ಕಂಬಗಳ ಅಲ್ಯೂಮಿನಿಯಂ ಹಾಗೂ ಕಾಪರ್ ವೈರ್ ಕದಿಯುತ್ತಿದ್ದ ಜಾಲಗಳನ್ನು ಬೇಧಿಸಿ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ.
ಅಪರಾಧ ತಡೆಗೆ ಮನೆ ಮನೆಗೆ ಪೊಲೀಸ್ ಹಾಗೂ ಲಾಕ್ಡ್ ಹೌಸ್ ಸರ್ವೆಲನ್ಸ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಒಂಟಿ ಹಿರಿಯ ನಾಗರಿಕರಿಗಾಗಿ ಆಸರೆ ಯೋಜನೆ ಮೂಲಕ ಭದ್ರತೆ ಒದಗಿಸಲಾಗುತ್ತಿದೆ. ಇದೇ ವೇಳೆ, ಯುವಪೀಳಿಗೆಯನ್ನು ಡ್ರಗ್ಸ್ ಮುಕ್ತಗೊಳಿಸಲು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ರೈಜ್ ಯೋಜನೆಯಡಿ ಬೇಡ ಬ್ರೋ ಎಂಬ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಹಾಗೂ ಯುವಜನತೆ ಮಾದಕ ದ್ರವ್ಯಗಳ ವಿರುದ್ಧ ಶೂನ್ಯ ಸಹಿಷ್ಣುತೆ ತೋರಬೇಕು. ಸೈಬರ್ ಕ್ರೈಮ್ ದೂರುಗಳಿಗೆಗೋಲ್ಡನ್ ಅವರ್ ನಲ್ಲಿ 1930 ನಂಬರ್ ಗೆ ಕರೆ ಮಾಡಬೇಕು. ಡ್ರಗ್ಸ್ ಮಾಹಿತಿ ನೀಡಲು ಟೋಲ್-ಫ್ರೀ 1908 ನಂಬರ್ ಗೆ ಸಾರ್ವಜನಿಕರು ಕರೆ ಮಾಡಿ ಸಹಕರಿಸಬೇಕು ಎಂದರು.