ಹೊಸಪೇಟೆ: ಸಿಡಿಲು ಬಡಿದ ಪರಿಣಾಮ ರೈತನ ಜೀವನಾಧಾರವಾಗಿದ್ದ ಭಾರಿ ಗಾತ್ರದ ಜೋಡೆತ್ತುಗಳು ದನದ ಕೊಟ್ಟಿಗೆಯಲ್ಲೇ ಸಾವನ್ನಪ್ಪಿದ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸಾಪುರ ತಾಂಡಾದಲ್ಲಿ ಈ ಘಟನೆ ಬುಧವಾರ ಸಂಜೆ ನಡೆದಿದೆ.
ವ್ಯಾಸಾಪುರ ತಾಂಡಾದ ರೈತ ವೆಂಕಟೇಶ್ ನಾಯ್ಕ ಎಂಬುವವರಿಗೆ ಸೇರಿದ ಜೋಡೆತ್ತುಗಳನ್ನು ಎಂದಿನಂತೆ ಕೊಟ್ಟಿಗೆಯಲ್ಲಿ ಕಟ್ಟಲಾಗಿತ್ತು. ಸಿಡಿಲಿನ ಹೊಡೆತಕ್ಕೆ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿವೆ. ಕೃಷಿ ಕೆಲಸಗಳಿಗಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಈ ದೈತ್ಯಾಕಾರದ ಜೋಡೆತ್ತುಗಳನ್ನು ತಂದಿದ್ದರು.
ವರಮಾನದ ಮೂಲವಾಗಿದ್ದ ಹಾಗೂ ಮನೆಯ ಮಕ್ಕಳಂತೆ ಸಾಕಿದ್ದ ಎತ್ತುಗಳನ್ನು ಕಳೆದುಕೊಂಡ ರೈತನ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ಉಳುಮೆಯ ಹಂಗಾಮಿನಲ್ಲೇ ಇಂತಹ ದುರಂತ ಸಂಭವಿಸಿರುವುದು ಕುಟುಂಬಕ್ಕೆ ಆಘಾತ ತಂದಿದೆ.
ಘಟನೆಗೆ ಸಂಬಂಧಿಸಿದಂತೆ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.