ಹೊಸಪೇಟೆ ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಅಯ್ಯಾಳಿ ತಿಮ್ಮಪ್ಪ, ರೂಪೇಶ್ ಕುಮಾರ್, ಜೀವರತ್ನಂ, ಸಂದೀಪ್ ಸಿಂಗ್, ಪ್ರಮುಖರಾದ ರೇವಣಸಿದ್ದಪ್ಪ, ಕಸಟ್ಟಿ ಉಮಾಪತಿ, ಅರ್ಪಿತ ಗೌಡ, ಮಧುರ ಚನ್ನ ಶಾಸ್ತ್ರಿ ಇತರರಿದ್ದರು.
- ವಿಶ್ವ ಪರಿಸರ ದಿನಾಚರಣೆಯಲ್ಲಿ ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಕರೆ
ಹೊಸಪೇಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದ ಏಕ್ ಪೇಡ್ ಮಾ ಕೆ ನಾಮ್ (ಅಮ್ಮನ ಹೆಸರಲ್ಲಿ ಒಂದು ಗಿಡ) ಅಭಿಯಾನದಲ್ಲಿ ಭಾಗವಹಿಸೋಣ ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಕರೆ ನೀಡಿದರು.
ಇಲ್ಲಿನ ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಹಾಗೂ ಪಕ್ಷದ ಸಂಘಟನಾ ಸಭೆಯಲ್ಲಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮನೆಯ ಅಂಗಳದಲ್ಲಿ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು, ಅದಕ್ಕೆ ನೀರು-ಗೊಬ್ಬರ ನೀಡಿ ಪೋಷಿಸಬೇಕು. ನಮಗೆ ಉಸಿರಾಡಲು ಬೇಕಾದ ಆಮ್ಲಜನಕವನ್ನು ನೀಡುವ ಗಿಡ-ಮರಗಳ ರಕ್ಷಣೆ ನಮ್ಮ ಹೊಣೆ. ಮರಗಳು ನೀಡುವ ಹೂವು, ಹಣ್ಣು, ನೆರಳನ್ನು ಪಡೆಯುವ ನಾವು, ಅವುಗಳನ್ನು ಬೆಳೆಸುವ ಹವ್ಯಾಸವನ್ನೂ ರೂಢಿಸಿಕೊಳ್ಳಬೇಕು. ಒಬ್ಬ ತಾಯಿ ತನ್ನ ಮಗುವನ್ನು ಹೇಗೆ ಪ್ರೀತಿಯಿಂದ ಸಾಕುತ್ತಾಳೋ, ಹಾಗೆಯೇ ನಾವು ಸಸಿಗಳನ್ನು ಪೋಷಿಸಬೇಕು. ಈ ಪರಿಸರ ದಿನದಂದು ನಮ್ಮ ಹೆತ್ತ ತಾಯಿಯ ಹೆಸರಿನಲ್ಲಿ ಗಿಡ ನೆಟ್ಟು, ಅದರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು ಎಂದು ತಿಳಿಸಿದರು.
ಮಂಡಲ ಅಧ್ಯಕ್ಷ ಶಂಕರ್ ಮೇಟಿ ಮಾತನಾಡಿ, ಪಕ್ಷದ ಬಲವರ್ಧನೆಗೆ ಕಾರ್ಯಕರ್ತರ ಶ್ರಮ ಅತಿ ಮುಖ್ಯ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದರೆ, ನಾವೆಲ್ಲರೂ ಬೂತ್ ಮಟ್ಟದಲ್ಲಿ ಕೆಲಸ ಪ್ರಾರಂಭಿಸಬೇಕು. ಕಾರ್ಯಕರ್ತರು ಸಂಪೂರ್ಣವಾಗಿ ಪಕ್ಷ ಕಟ್ಟುವ ಕೆಲಸದಲ್ಲಿ ನಿರತರಾಗಬೇಕು ಎಂದು ಕರೆ ನೀಡಿದರು.
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ಜೀವರತ್ನಂ, ಜಿಲ್ಲಾ ಉಪಾಧ್ಯಕ್ಷರಾದ ಸಂದೀಪ್ ಸಿಂಗ್, ಪ್ರಮುಖರಾದ ರೇವಣಸಿದ್ದಪ್ಪ, ಕಸಟ್ಟಿ ಉಮಾಪತಿ, ಅರ್ಪಿತ ಗೌಡ, ಮಧುರ ಚನ್ನ ಶಾಸ್ತ್ರಿ, ನಟರಾಜ್, ಗೌಳಿ ಬಸವರಾಜ್, ಹೊನ್ನೂರಪ್ಪ, ಇಮ್ತಿಯಾಜ್, ಕವಿತಾ ಆನಂದ್, ಅನುಪಮಾ, ಜಯಶ್ರೀ, ವಿಜಯಲಕ್ಷ್ಮೀ, ರೇಖಾ, ಶೋಭಾ, ಸುಮಯ್ಯ, ಗೌಸಿಯಾ, ರೇಣುಕಾ ಇತರರಿದ್ದರು.