ಕಂಪ್ಲಿ ಸಮೀಪದ ದೇವಸಮುದ್ರ ಗ್ರಾಮದ ಮಲ್ಲಯ್ಯತಾತ ಮಠದಲ್ಲಿ ಆಯೋಜಿಸಿದ್ದ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪ್ರಮುಖರಾದ ರೋಹಿತಾಕ್ಷ, ಕಡೆಮನಿ ಮಂಜುನಾಥ, ವೆಂಕೋಬ ನಾಯಕ, ಡಿ.ಎಂ.ಭಾಗ್ಯಮ್ಮ, ಎಲ್.ರಾಘವೇಂದ್ರ ಇತರರಿದ್ದರು.
ಕಂಪ್ಲಿ: ಮಹಿಳೆಯರು ಕೌಶಲ ಆಧಾರಿತ ಸ್ವ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು.
ದೇವಸಮುದ್ರ ಮಲ್ಲಯ್ಯತಾತ ಮಠದಲ್ಲಿ ಮಹಿಳೆಯರಿಗಾಗಿ ಎಸ್‌ಕೆಡಿಆರ್‌ಡಿಪಿನಿಂದ ಹಮ್ಮಿಕೊಂಡಿದ್ದ ಒಂದು ವಾರದ ಕೌಶಲ ಆಧಾರಿತ ಉದ್ಯಮಶೀಲತಾ ಉಚಿತ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ತರಬೇತಿ ಪಡೆದ ಮಹಿಳೆಯರು ಆದಾಯ ಗಳಿಕೆಗೆ ಮುಂದಾಗಬೇಕು. ಆದಾಯವನ್ನು ಭವಿಷ್ಯತ್ತಿಗಾಗಿ ಉಳಿಸಿ ಬೆಳೆಸುವಲ್ಲಿ ಜಾಗೃತರಾಗಬೇಕು ಎಂದರು.
ತಾಲೂಕು ಯೋಜನಾಧಿಕಾರಿ ಎಲ್.ರಾಘವೇಂದ್ರ ಮಾತನಾಡಿ, ಮಹಿಳೆಯರಿಗಾಗಿ ಬಟ್ಟೆ, ವ್ಯಾನಿಟಿ ಬ್ಯಾಗ್ ತಯಾರಿಕೆ ಸೇರಿದಂತೆ ಕೌಶಲ ಆಧಾರಿತ ತರಬೇತಿ ನೀಡಲಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ತರಬೇತಿ ಪಡೆದುಕೊಂಡ 35ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ತರಬೇತಿ ಕೇಂದ್ರದ ಅಧ್ಯಕ್ಷೆ ಡಿ.ಎಂ.ಭಾಗ್ಯಮ್ಮ, ಗ್ರಾಪಂ ಸದಸ್ಯರಾದ ವೆಂಕೋಬ ನಾಯಕ, ಪಂಪಣ್ಣ, ಸಹಿಪ್ರಾ ಮುಖ್ಯಶಿಕ್ಷಕ ರಂಗಪ್ಪ ಕಟ್ಟಿಮನಿ, ಸಮನ್ವಯ ಅಧಿಕಾರಿ ರೇಖಾ, ಸೇವಾ ಪ್ರತಿನಿಧಿ ಎಂ.ವನಜಾಕ್ಷಿ ಇತರರಿದ್ದರು.