ಹೊಸಪೇಟೆ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ 2570ನೇ ಬುದ್ಧ ಪೂರ್ಣಿಮೆ ದಿನ ಆಚರಿಸಲಾಯಿತು. ಪ್ರಾಧ್ಯಾಪಕ ಚಿನ್ನಸ್ವಾಮಿ ಸೋಸಲೆ, ಬಿಇಒ ಶೇಖರಪ್ಪ ವರಪೇಟೆ, ಪ್ರಮುಖರಾದ ಸೋಮಶೇಖರ್ ಬಣ್ಣದಮನೆ, ಪೀರ್ ಬಾಷಾ, ಸೂರ್ಯನಾರಾಯಣ ಇತರರಿದ್ದರು. 
ವಿಜಯನಗರ

ಭಗವಾನ್ ಗೌತಮ ಬುದ್ಧರ ಚಿಂತನೆ ಅಳವಡಿಸಿಕೊಳ್ಳೋಣ

ಪ್ರಮುಖ ಮುಖ್ಯಾಂಶಗಳು

  • ಬುದ್ಧ ಪೂರ್ಣಿಮೆ ದಿನಾಚರಣೆಯಲ್ಲಿ ಪ್ರಾಧ್ಯಾಪಕ ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯ
ಹೊಸಪೇಟೆ: ದಾರ್ಶನಿಕ, ವಿರಾಗಿ ಭಗವಾನ್ ಗೌತಮ ಬುದ್ಧರ ಆದರ್ಶಗಳನ್ನು ನಾವಿಂದು ಅಳವಡಿಸಿಕೊಳ್ಳ ಬೇಕು. ಅವರ ಶ್ರೇಷ್ಠ ಚಿಂತನೆಗಳು ಮುಂದಿನ ಪೀಳಿಗೆಗೂ ಮಾರ್ಗದರ್ಶನ ನೀಡುವಂತಿವೆ ಎಂದು ಕನ್ನಡ ವಿವಿ ಪ್ರಾಧ್ಯಾಪಕ ಚಿನ್ನಸ್ವಾಮಿ ಸೋಸಲೆ ಅಭಿಪ್ರಾಯಪಟ್ಟರು.
ನಗರ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಆಯೋಜಿಸಿದ 2570ನೇ ಬುದ್ಧ ಪೂರ್ಣಿಮೆ ದಿನಾಚರಣೆಯಲ್ಲಿ ಮಾತನಾಡಿದರು.
ಬುದ್ಧನ ಉನ್ನತ ಆದರ್ಶಗಳು, ಅಹಿಂಸಾ ತತ್ವ, ಸಾಮರಸ್ಯದ ಸಂದೇಶಗಳು ಚಿರ ನೂತನ. ಮಾನವೀಯತೆಯ ಸಂಕೇತಗಳು ಇಡೀ ವಿಶ್ವಕ್ಕೆ ಅನ್ವಯವಾಗಲಿವೆ. ಬುದ್ಧನು ಸಮಾನತೆ, ಪ್ರೀತಿ, ದಯೆ, ಸಹಿಷ್ಣುತೆಯ ಪ್ರತೀಕ. ಸೌಹಾರ್ದ, ಸಹಾನುಭೂತಿಯಿಂದ ಸಮಾಜಕ್ಕಾಗಿ ಸೇವೆ ಮಾಡುವ ಸ್ಫೂರ್ತಿಯನ್ನು ನೀಡಿದ್ದಾರೆ ಎಂದು ಸ್ಮರಿಸಿದ ಅವರು, ಜಾಗತಿಕ ಸಂಘರ್ಷಗಳ ನಡುವೆ ಬುದ್ಧನ ಅಹಿಂಸೆ ಮತ್ತು ಕರುಣೆಯ ತತ್ವಗಳು ಅತ್ಯಂತ ಪ್ರಸ್ತುತವಾಗಿವೆ ಎಂದರು.
ಕಾರ್ಯಕ್ರಮವನ್ನು ಅಂಬೇಡ್ಕರ್ ವೃತ್ತದಲ್ಲಿ ಬುದ್ಧ ಮತ್ತು ಡಾ.ಬಿ.ಅರ್.ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ನಂತರ ತೆರೆದ ವಾಹನದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ ಅವರ ಭಾವಚಿತ್ರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.
ಬಿಇಒ ಶೇಖರಪ್ಪ ವರಪೇಟೆ, ಪ್ರಮುಖರಾದ ಸೋಮಶೇಖರ್ ಬಣ್ಣದಮನೆ, ಪೀರ್ ಬಾಷಾ, ಸೂರ್ಯನಾರಾಯಣ, ಲಕ್ಷ್ಮಣ್, ಜಿ.ಶಿವಕುಮಾರ್, ಮಾವ್ನಹಳ್ಳಿ ಬಸವರಾಜ್, ಧರ್ಮನಗೌಡ, ಜೆ.ಸಿ.ಈರಣ್ಣ, ರಾಮಚಂದ್ರ ಬಾಬು, ಮರಿಸ್ವಾಮಿ, ಪ್ರಕಾಶ್, ಮುದುಕಪ್ಪ, ಸುನಿಲ್, ಹನುಮಂತ, ರಮೇಶ್, ಕೆ.ಸಿ.ಚಂದ್ರ ಇತರರಿದ್ದರು.