ಹೂವಿನಹಡಗಲಿಯಲ್ಲಿ ಸಿಂಗಟಾಲೂರು ಏತನೀರಾವರಿ ಯೋಜನೆ ಕಚೇರಿ ಎಫ್‌ಡಿಎ ನಿರುಪಮಾಗೆ ಕರ್ನಾಟಕ ರಾಜ್ಯ ರೈತಸಂಘದಿಂದ ಮನವಿ ಸಲ್ಲಿಸಲಾಯಿತು.
ಹೂವಿನಹಡಗಲಿ: ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬೆಳೆಗಳು ಒಣಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘದಿಂದ ಸಿಂಗಟಾಲೂರು ಏತನೀರಾವರಿ ಯೋಜನೆ ಎಫ್‌ಡಿಎ ನಿರುಪಮಾಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ಮಳೆ ಬಾರದ ಕಾರಣ ಕೆರೆ, ಕಟ್ಟೆಗಳು ಸಂಪೂರ್ಣ ಬರಿದಾಗಿವೆ. ಜಮೀನುಗಳಲ್ಲಿನ ಕೊಳವೆಬಾವಿಗಳು ಬತ್ತಿವೆ. ಇದರಿಂದಾಗಿ ರೈತರು ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನಿಂದ ಕಾಲುವೆಗಳಿಗೆ ನೀರು ಹರಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.