ರಾಗಿ ಖರೀದಿ ಕೇಂದ್ರದ ಏಜೆನ್ಸಿ ರದ್ದುಗೊಳಿಸಿದ್ದನ್ನು ಖಂಡಿಸಿ ಹರಪನಹಳ್ಳಿ ಎಪಿಎಂಸಿ ಕಚೇರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರೈತ ಪ್ರಮುಖರಾದ ಕಬ್ಬಳ್ಳಿ ಮೈಲಪ್ಪ, ತೆಲಿಗಿ ಗಿರಜ್ಜಿ ನಾಗರಾಜ್, ಹಲವಾಗಲು ರುದ್ರಪ್ಪ, ಮಂಜುನಾಥ, ಬಾಗಳಿಯ ಪಡತಪ್ಪರ್ ಶಿವರಾಜ್, ಹೊಸ ಅಂಗಡಿ ಶಿವಕುಮಾರ್, ಪುಣಭಗಟ್ಟ ಮಂಜುನಾಥ, ಗೋವೇರಹಳ್ಳಿ ರಾಜಶೇಖರ ಇತರರಿದ್ದರು. 
ವಿಜಯನಗರ

ರಾಗಿ ಖರೀದಿ ಪಾರದರ್ಶಕವಾಗಿರಲಿ

ಪ್ರಮುಖ ಮುಖ್ಯಾಂಶಗಳು

  • ಹರಪನಹಳ್ಳಿ ಎಪಿಎಂಸಿ ಕಚೇರಿಗೆ ಬೆಳೆಗಾರರ ಮುತ್ತಿಗೆ
  • ಹರಪನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರತಿಭಟನೆ
ಹರಪನಹಳ್ಳಿ: ರಾಗಿ ಖರೀದಿ ಕೇಂದ್ರದ ಏಜೆನ್ಸಿ ರದ್ದುಗೊಳಿಸಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ರೈತರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ರಾಗಿ ಖರೀದಿ ಕೇಂದ್ರ ಆರಂಭವಾದಾಗಿನಿಂದ ರೈತರು ರಾಗಿ ಮಾರಾಟಕ್ಕೆ ಹರಸಾಹಸ ಪಡಬೇಕಾಗಿತ್ತು. ಒಂದು ಟ್ರಾೃಕ್ಟರ್ ರಾಗಿಯನ್ನು ಮಾರಾಟ ಮಾಡಲು ಕನಿಷ್ಠ ನಾಲ್ಕೈದು ದಿನ ಹಗಲು-ರಾತ್ರಿ ಕಾಯಬೇಕಾಗಿತ್ತು. ಪ್ರತಿ ಕ್ವಿಂಟಾಲ್‌ಗೆ ಮೂರು ಕೆಜಿ ಹೆಚ್ಚು ರಾಗಿಯನ್ನು ಅಕ್ರಮವಾಗಿ ಪಡೆಯಲಾಯಿತು. ರೈತರಿಂದ ಪ್ರತಿ ಕ್ವಿಂಟಾಲ್‌ಗೆ 40 ರೂ. ಹಮಾಲಿ ಹಣವೆಂದು ಸುಲಿಗೆ ಮಾಡಲಾಯಿತು. ರಾಗಿಯನ್ನು ಪಾರದರ್ಶಕವಾಗಿ ಖರೀದಿ ಮಾಡಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡಲಾಗುವುದು ಎಂದು ರೈತರು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಉಪನಿರ್ದೇಶಕ ರಿಯಾಜ್ ಮಾತನಾಡಿ, ರೈತರಿಂದ 50 ಕೆಜಿ 600 ಗ್ರಾಂ ತೂಕದಷ್ಟು ರಾಗಿ ಪಡೆಯಲು ಸರ್ಕಾರದ ಅನುಮತಿ ಇರುತ್ತದೆ. ಅದಕ್ಕೂ ಹೆಚ್ಚಿನ ತೂಕವನ್ನು ಯಾವುದೇ ಕಾರಣಕ್ಕೂ ಪಡೆಯುವಂತಿಲ್ಲ ಎಂದರು.
ತಹಸೀಲ್ದಾರ್ ಬಿ.ವಿ.ಗಿರೀಶ್‌ಬಾಬು ಮಾತನಾಡಿ, ರೈತರಿಂದ ಅಕ್ರಮವಾಗಿ ಪ್ರತಿ ಕ್ವಿಂಟಾಲ್‌ಗೆ 3 ಕೆಜಿ ರಾಗಿ ಪಡೆಯಲಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ರಾಗಿ ಖರೀದಿ ಏಜೆನ್ಸಿಯ ಪರವಾನಗಿಯನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ. ರೈತರಿಗೆ ವಿಳಂಬವಾಗುವ ಉದ್ದೇಶದಿಂದ ರದ್ದು ಪಡಿಸಿರುವ ಏಜೆನ್ಸಿಗೆ ಪಾರದರ್ಶಕವಾಗಿ ರಾಗಿ ಖರೀದಿಸಲು ಸೂಚಿಸಿ, ಕೇಂದ್ರದ ಬಳಿ ಸಿಸಿ ಕ್ಯಾಮರಾ ಅಳವಡಿಸಿ ಅಕ್ರಮಕ್ಕೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.
ಎಸಿ ಟಿ.ಸುರೇಶ್ ಕುಮಾರ್, ಎಪಿಎಂಸಿ ಜಿಲ್ಲಾ ವ್ಯವಸ್ಥಾಪಕ ಗೂರಪ್ಪ, ಎಪಿಎಂಸಿ ಕಾರ್ಯದರ್ಶಿ ಶ್ರೀಕಾಂತ ಆರ್.ಗುಳೇದ, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್‌ಐ ಶಂಭುಲಿಂಗ ಎಸ್.ಹಿರೇಮಠ ಇತರರಿದ್ದರು.