- ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್. ಭಾಸ್ಕರ್ ರೆಡ್ಡಿ ಆಗ್ರಹ
ಹೊಸಪೇಟೆ: ಜಿಲ್ಲಾ ಕೇಂದ್ರವಾದ ನಗರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಅವರು ವಿಧಾನಸಭೆಯಲ್ಲಿ ಧ್ವನಿಯೆತ್ತಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಜಿಲ್ಲಾ ಕಾರ್ಯದರ್ಶಿ ಆರ್.ಭಾಸ್ಕರ್ ರೆಡ್ಡಿ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2015ರಿಂದ ಹೋರಾಟ ನಡೆಸುತ್ತಿದ್ದರೂ ನಿವೇಶನ ರಹಿತರಿಗೆ ಜಾಗ ನೀಡಿಲ್ಲ. ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸರ್ಕಾರಿ ಭೂಮಿಯನ್ನು ಹಂಪಿ ಶುಗರ್ಸ್ ಖಾಸಗಿ ಕಂಪನಿಗೆ ವಹಿಸಿರುವುದನ್ನು ಪಕ್ಷ ತೀವ್ರವಾಗಿ ವಿರೋಧಿಸುತ್ತದೆ ಎಂದರು.
ಜತೆಗೆ, ರೈಲ್ವೆ ಮೇಲ್ಸೇತುವೆ ಕಾಮಗಾರಿ ಶೀಘ್ರ ಮುಗಿಸುವುದು, ನೂತನ ಜಿಲ್ಲಾ ಆಸ್ಪತ್ರೆ ಉದ್ಘಾಟನೆ ಹಾಗೂ ರೈತರಿಗೆ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಲು ಗಡುವು ವಿಧಿಸಿದರು. ಈ ತಿಂಗಳ ಅಂತ್ಯದೊಳಗೆ ಬೇಡಿಕೆಗಳು ಈಡೇರದಿದ್ದರೆ ಅಕ್ಟೋಬರ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಮುಖಂಡರಾದ ಎನ್. ಯಲ್ಲಾಲಿಂಗ ಮಾತನಾಡಿ, ಶಾಸಕರು ಚುನಾವಣಾ ಭರವಸೆಯಂತೆ ಸಕ್ಕರೆ ಕಾರ್ಖಾನೆ ಆರಂಭದ ದಿನಾಂಕ ಪ್ರಕಟಿಸಬೇಕು ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು; ವಿಫಲವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ಎಂ.ಜAಬಯ್ಯ ನಾಯಕ, ಎಂ.ಗೋಪಾಲ, ಜೆ.ಎಂ.ಚನ್ನಬಸಯ್ಯ ಇತರರಿದ್ದರು.