ಹಗರಿಬೊಮ್ಮನಹಳ್ಳಿಯಲ್ಲಿ ಕವಿಗೋಷ್ಠಿ ಕಾರ್ಯಕ್ರಮವನ್ನು ವಿಎಸ್‌ಕೆ ವಿವಿ ಸಿಂಡಿಕೇಟ್ ಸದಸ್ಯ ಬಿ.ಪೀರ್ ಬಾಷಾ ಉದ್ಘಾಟಿಸಿದರು.
ಹಗರಿಬೊಮ್ಮನಹಳ್ಳಿ: ಯುದ್ಧದ ಸಮಯದಲ್ಲಿ ದೇಶದ ರಕ್ಷಣೆಗೆ ರಾಜಕೀಯ ಪ್ರಜ್ಞೆಯುಳ್ಳವರು ಧ್ವನಿ ಎತ್ತಬೇಕಾಗಿದೆ ಎಂದು ವಿಎಸ್‌ಕೆ ವಿವಿ ಸಿಂಡಿಕೇಟ್ ಸದಸ್ಯ ಬಿ.ಪೀರ್ ಬಾಷಾ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಎದ್ದೇಳು ಕರ್ನಾಟಕ ವೇದಿಕೆ ಹಾಗೂ ಬಂಡಾಯ ಸಾಹಿತ್ಯ ಸಂಘಟನೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಯುದ್ಧ ವಿರೋಧಿ ಕವಿಗೋಷ್ಠಿ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಪ್ರಭುತ್ವ ಸದಾ ಜನತೆಯ ನಾಡಿಮಿಡಿತ ಅರಿಯುವ ಕೆಲಸ ಮಾಡಬೇಕೇ ಹೊರತು ಉಸಿರು ನಿಲ್ಲಿಸುವ ಕೆಲಸ ಮಾಡಬಾರದು. ಆಳುವವರು ತಮ್ಮದೇ ಆದ ಲೋಕದಲ್ಲಿ ಮುಳುಗಿ, ದೈನಂದಿನ ಜನಜೀವನ ಅಸ್ತವ್ಯಸ್ತವಾದಾಗ ಹಸಿದವರೆದುರು ಸಿದ್ಧಾಂತವನ್ನು ಬೋಧಿಸಲಾಗದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸುಧಾ ಚಿದಾನಂದಗೌಡ ಮಾತನಾಡಿ, ಯುದ್ಧದ ನೇರ ಪರಿಣಾಮ ಸಾಮಾನ್ಯ ಕುಟುಂಬಗಳ ಮೇಲಾಗುತ್ತಿದೆ. ಸಮಾಜ ಕಲುಷಿತಗೊಳ್ಳುವ ಬಗ್ಗೆ ಅರಿವಿರಬೇಕು ಎಂದರು.
ಹಿರಿಯ ಸಾಹಿತಿ ಹುರುಕಡ್ಲಿ ಶಿವಕುಮಾರ ಯುದ್ಧದ ದೂರಕಾಲಿಕ ಪರಿಣಾಮಗಳ ಕುರಿತು ಕವನ ವಾಚಿಸಿದರು.
ಉಪ್ಪಾರ ಬಸಪ್ಪ, ಮಂಜುನಾಥ ಗಂಡಿ, ಮೆಹಬೂಬ, ಕೊಟ್ರೇಶ್ ನಾಯಕ ಲಮಾಣಿ, ನಿರ್ಮಲಾ ಶಿವನಗುತ್ತಿ, ಕುಮಾರ್ ಸಮತಳ, ಅರುಣಾ ಕೊಟ್ರೇಶ್, ಗಂಗಾ ಕೊಟ್ಟೂರು, ವಿಶಾಲ್ ಮ್ಯಾಸರ್, ಹುಲಿಗೆಮ್ಮ ಸರ್ದಾರ್, ಮಂಜುನಾಥ ಕೊಟ್ಟೂರು ಯುದ್ಧವನ್ನು ವಿರೋಧಿಸುವ ಕವನಗಳನ್ನು ವಾಚಿಸಿದರು. ಪ್ರಮುಖರಾದ ರಂಗಪ್ಪ ದಾಸರ, ಜಯಮ್ಮ ಮತ್ತಿಹಳ್ಳಿ, ವಾಸಂತಿ ಸಾಲ್ಮನಿ ಇತರರಿದ್ದರು