ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೆರೆಯಲ್ಲಿ ಶಾಸಕ ಕೃಷ್ಣನಾಯ್ಕ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಹಗರಿಬೊಮ್ಮನಹಳ್ಳಿ: ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮಗಳನ್ನು ತಾರತಮ್ಯ ಧೋರಣೆ ಹಣೆಪಟ್ಟಿಯಿಂದ ಹೊರತರಲು ಅಧಿಕಾರಿಗಳು ನನ್ನೊಂದಿಗೆ ಸಹಕರಿಸಬೇಕೆಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಮೋರಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು. ಬನ್ನಿಕಲ್ಲು, ಹಂಪಸಾಗರ, ಗದ್ದಿಕೆರೆ, ಮೋರಗೆರೆ ಹಾಗೂ ಸೊನ್ನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ನನೆಗುದಿಗೆ ಬೀಳದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಸಕ್ರಿಹಳ್ಳಿ, ನಾಗಲಾಪುರ, ಹಂಪಸಾಗರ 3ನೇ ಕಾಲನಿ ಕಂದಾಯ ಗ್ರಾಮ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಗಿರಿಗೊಂಡನಹಳ್ಳಿ, ಗದ್ದಕೆರೆ ಹೊಸ ಕ್ಯಾಂಪ್, ಬನ್ನಿಕಲ್ಲು ನವಗ್ರಾಮ, ಎಂ.ಪಿ.ಪ್ರಕಾಶ್ ನಗರ, ಏಣಗಿ ಬಸಾಪುರ, ಜಿ.ಕೋಡಿಹಳ್ಳಿ ಹೊಸ ಕಾಲನಿ, ಸೊನ್ನ ಗ್ರಾಮದ ಕೆರೆ ಅಂಗಳದ ಮನೆಗಳು ಪ್ರದೇಶವನ್ನು ಕಂದಾಯ ಗ್ರಾಮವಾಗಿಸಲು ಪ್ರಸ್ತಾವನೆಗೆ ಕಳಿಸಲಾಗುವುದು ಎಂದು ತಿಳಿಸಿದರು.
ಖಾಸಗಿ ನಿವೇಶನ ಅಥವಾ ಬಡಾವಣೆಗಳಿಗೆ ಇ-ಸ್ವತ್ತು, ಹಕ್ಕುಪತ್ರ ನೀಡಲು ಕ್ರಮ ವಹಿಸಬೇಕು. ತೋಟದ ಮನೆಗಳಿಗೆ 11ಬಿ ನೀಡಬೇಕು. ಗ್ರಾಮಗಳ ಸ್ವಚ್ಛತೆ ಮತ್ತು ಸೌಲಭ್ಯಗಳ ಬಗ್ಗೆ ಒಂದು ಗ್ರೂಪ್ ರಚಿಸಿ ಮಾಹಿತಿಯನ್ನು ನಿರಂತರ ಅಪ್ಡೇಟ್ ಮಾಡಬೇಕು ಎಂದು ತಿಳಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳಿದ್ದರು.