ಉದ್ಯೋಗ ಸೃಷ್ಟಿಸುವಲ್ಲಿ ಸರ್ಕಾರ ವಿಫಲ
ಅಧಿವೇಶನದಲ್ಲಿ ಶಾಸಕ ನೇಮಿರಾಜ್‌ನಾಯ್ಕ ಆರೋಪ
ಹಗರಿಬೊಮ್ಮನಹಳ್ಳಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿ, ಶೈಕ್ಷಣಿಕ ಮತ್ತು ಆರೋಗ್ಯ ಪ್ರಗತಿಗೆ ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಮತ್ತು ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂದು ಶಾಸಕ ಕೆ.ನೇಮಿರಾಜ್‌ನಾಯ್ಕ ಹೇಳಿದರು.
ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ರೈತರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಈರುಳ್ಳಿ ಮತ್ತು ದಾಳಿಂಬೆಗೆ ಬೆಂಬಲ ಬೆಲೆ ನೀಡಬೇಕು. ಮೆಕ್ಕೆಜೋಳ, ರಾಗಿ, ಜೋಳ ಖರೀದಿ ಕೇಂದ್ರಗಳನ್ನು ತೆರೆದು, ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರಿಗೆ ನೆರವಾಗಲು ನೀರಾವರಿ ಯೋಜನೆಗಳ ಅಭಿವೃದ್ಧಿಯಾಗಬೇಕಿದೆ. ಬಸವಣ್ಣ ಅವರ ಪುಣ್ಯಭೂಮಿ ಕಲ್ಯಾಣ ಕರ್ನಾಟಕ ಎಂದು ನಾಮಕರಣವಾಗಿದೆಯೇ ಹೊರತು 371 (ಜೆ) ಪಾರದರ್ಶಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ದೂರಿದರು.
ನಮ್ಮ ಭಾಗದಲ್ಲಿ 17 ಕೆರೆಗಳಿಗೆ ನೀರು ತುಂಬಿಸಬೇಕಿದ್ದು, ಯೋಜನೆ ನನೆಗುದಿಗೆ ಬಿದ್ದಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಅರ್ಧ ಹಣ ಕೊಟ್ಟರೆ, ಉಳಿದ ಹಣ ಕೇಂದ್ರದಿಂದ ತರುವ ಪ್ರಯತ್ನ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಇದುವರೆಗೂ ಸದಸ್ಯರನ್ನು ನೇಮಕಗೊಳಿಸಿಲ್ಲ ಎಂದು ತಿಳಿಸಿದರು.