- ಕಂಠೀರವ ಸ್ಟುಡಿಯೋಸ್ ಸಂಸ್ಥೆಯ ಅಧ್ಯಕ್ಷ ಮಹಬೂಬ್ ಪಾಷಾ ಹೇಳಿಕೆ
ಹೊಸಪೇಟೆ: ಕಂಠೀರವ ಸ್ಟುಡಿಯೋಸ್ 60 ವರ್ಷಗಳ ವಜ್ರಮಹೋತ್ಸವದ ನಿಮಿತ್ತ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಸ್ಥೆಯ ವಿಸ್ತರಣೆಗಾಗಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣನಾಯಕನಕೆರೆ ಬಳಿ ಸರ್ಕಾರಿ ಜಮೀನು ಪರಿಶೀಲಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಬೂಬ್ ಪಾಷಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರೀಕರಣವನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೆ ವಿಕೇಂದ್ರೀಕರಣಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಕಣವಿಹಳ್ಳಿ ಗ್ರಾಮದ ಸರ್ವೆ ನಂಬರ್ 65/1 ರಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ 25 ಎಕರೆ ಕಂದಾಯ ಜಮೀನನ್ನು ಗುರುತಿಸಲಾಗಿದ್ದು, ಮಂಜೂರಾತಿಗಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಶಿವಮೊಗ್ಗದಲ್ಲಿಯೂ ಜಮೀನನ್ನು ಗುರುತಿಸಲಾಗಿದ್ದು ಎಂದರು.
ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಿರುವುದರಿಂದ ಉತ್ತರ ಕರ್ನಾಟಕ ಹಾಗೂ ಮಲೆನಾಡಿನ ಶಿವಮೊಗ್ಗದಲ್ಲಿ ಪರ್ಯಾಯ ಸ್ಟುಡಿಯೋ ನಿರ್ಮಿಸಲು ನಿರ್ಧರಿಸಲಾಗಿದೆ. ವಿಜಯನಗರವು ಹಂಪಿ, ತುಂಗಭದ್ರಾ ಜಲಾಶಯ ಹಾಗೂ ಐಹೊಳೆ-ಬಾದಾಮಿಗೆ ಹತ್ತಿರವಿರುವುದರಿಂದ ಐತಿಹಾಸಿಕ ಮತ್ತು ಹೊರಾಂಗಣ ಚಿತ್ರೀಕರಣಕ್ಕೆ ಕೇಂದ್ರಬಿಂದುವಾಗಲಿದೆ. ಸ್ಥಳೀಯ ಕಲಾವಿದರು, ತಂತ್ರಜ್ಞರಿಗೆ ಇದರಿಂದ ಉದ್ಯೋಗಾವಕಾಶ ದೊರೆಯಲಿದೆ. ಇಲ್ಲಿ ಸಿನಿಮಾಗಳಷ್ಟೇ ಅಲ್ಲದೆ, ಒಟಿಟಿ ಕಂಟೆಂಟ್, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅತ್ಯಾಧುನಿಕ ಫ್ಲೋರ್‌ಗಳನ್ನು ನಿರ್ಮಿಸಲಾಗುವುದು. ಜಮೀನು ಹಸ್ತಾಂತರಗೊಂಡ ನಂತರ ಕಾಮಗಾರಿ ಆರಂಭಿಸಿ, ಸಂಪೂರ್ಣವಾಗಿ ಸಿದ್ಧಗೊಳ್ಳಲು ಕನಿಷ್ಠ ಎರಡು ವರ್ಷ ಬೇಕಾಗಬಹುದು ಎಂದು ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ ಮಾತನಾಡಿ, ಸ್ಟುಡಿಯೋ ನಿರ್ಮಾಣಕ್ಕೆ ಕನಿಷ್ಠ 25 ಎಕರೆ ಭೂಮಿ ಕೋರಲಾಗಿದೆ. ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಗತ್ಯ ಜಮೀನು ಗುರುತಿಸಲಾಗಿದ್ದು, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.