ಹೊಸಪೇಟೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಎಎಸ್ಪಿ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಗಂಗಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುದೀಪ್ ಕುಮಾರ್ ಉಂಕಿ ಇತರರಿದ್ದರು. 
ವಿಜಯನಗರ

ಅಂಗವಿಕಲ ಮುಕ್ತ ಸಮಾಜ ಕೈಜೋಡಿಸಿ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿ ಕವಿತಾ ಎಸ್.ಮನ್ನಿಕೇರಿ ಕರೆ
ಹೊಸಪೇಟೆ: ಮಗು ಜನಿಸಿದ ನಂತರ ಅದರ ನ್ಯೂನತೆಗಳಿಗೆ ಚಿಕಿತ್ಸೆ ಹುಡುಕುವುದಕ್ಕಿಂತ, ಗರ್ಭಾವಸ್ಥೆಯಲ್ಲೇ ಮಗುವಿನ ಅಸಹಜತೆ ಬೆಳವಣಿಗೆ ಪತ್ತೆಹಚ್ಚುವ ಮೂಲಕ ವಿಕಲಚೇತನ ಮುಕ್ತ ಸಮಾಜ ನಿರ್ಮಾಣಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮಗುವಿನ ಬೆಳವಣಿಗೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬAದಲ್ಲಿ ಕೂಡಲೇ ವೈದ್ಯರ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಮೂಢನಂಬಿಕೆಗಳಿಗೆ ಒಳಗಾಗದೆ, ವೈಜ್ಞಾನಿಕವಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಪೋಷಕರಿಗೆ ಮನವರಿಕೆ ಮಾಡಬೇಕು. ಗರ್ಭಧಾರಣೆಯ 18 ರಿಂದ 22 ವಾರಗಳ ಅವಧಿಯಲ್ಲಿ ಮಾಡಲಾಗುವ ಅನಾಮಲಿ ಸ್ಕಾö್ಯನ್ ಬಗ್ಗೆ ನಗರ ಸೇರಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಗರ್ಭದಲ್ಲಿರುವ ಮಗುವಿನ ದೈಹಿಕ ಅಥವಾ ಮಾನಸಿಕ ಅಸಹಜತೆಗಳನ್ನು ಮೊದಲೇ ಪತ್ತೆಹಚ್ಚುವುದರಿಂದ ಮುಂದಾಗುವ ಅನಾಹುತ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಪೋಷಣ್ ಅಭಿಯಾನದಡಿ ಜಿಲ್ಲೆಯ 122182 ಫಲಾನುಭವಿಗಳ ಪೈಕಿ 122136 ಆಧಾರ್ ಜೋಡಣೆ ಕಾರ್ಯ ಪೂರ್ಣಗೊಳಿಸಿ ಶೇ.99.96 ರಷ್ಟು ಆಧಾರ್ ಜೋಡಣೆ ಪ್ರಗತಿ ಸಾಧಿಸಿದೆ. ಉಳಿದ ಶೇ.0.04 ರಷ್ಟು ಪ್ರಗತಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಆಪ್‌ನಲ್ಲಿ ಫಲಾನುಭವಿಗಳ ಮೊಬೈಲ್ ಸಂಖ್ಯೆಯನ್ನು ದೃಢೀಕರಿಸುವ ಪ್ರಕ್ರಿಯೆಯಲ್ಲಿ ಶೇ.96.30 ರಷ್ಟು ಸಾಧನೆಯಾಗಿದೆ. ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ಶೇ.100 ಕ್ಕೆ ಹೆಚ್ಚಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ 1891 ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ 3 ರಿಂದ 6 ವರ್ಷದ ಮಕ್ಕಳ ಪೈಕಿ ಶೇ.93 ರಷ್ಟು ಮಕ್ಕಳು ಸಕ್ರಿಯವಾಗಿ ಶಾಲಾ ಪೂರ್ವ ಶಿಕ್ಷಣದಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕಾಲಕಾಲಕ್ಕೆ ಸರಿಯಾಗಿ ಮನೆ ಭೇಟಿ ನೀಡಬೇಕು. ತಾಯಂದಿರಿಗೆ ಮಗುವಿನ ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.