ಹರಪನಹಳ್ಳಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಮಗುವಿಗೆ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಲಸಿಕೆ ಹಾಕಿದರು.
ಹರಪನಹಳ್ಳಿ: ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಸಾರ್ವಜನಿಕ ಅಸ್ಪತ್ರೆಯಲ್ಲಿ ಮಗುವಿಗೆ ಲಸಿಕೆ ಹಾಕಿ ಮಾತನಾಡಿದರು. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪೋಲಿಯೋ ಹನಿಯನ್ನು ತಪ್ಪದೆ ಹಾಕಿಸುವ ಮೂಲಕ ಅಂಗವೈಕಲ್ಯದಿಂದ ಪಾರು ಮಾಡಬೇಕು. ಇದರಿಂದ ಪೋಲಿಯೋ ವೈರಾಣು ಹರಡುವಿಕೆಯನ್ನು ತಡೆಗಟ್ಟಬಹುದು. ಈ ಮೂಲಕ ಪೋಲಿಯೋ ನಿರ್ಮೂಲನೆ ಮಾಡಲು ಸಾಧ್ಯ ಎಂದರು.
ಮುಖ್ಯ ವೈದ್ಯಾಧಿಕಾರಿ ಡಾ.ದತ್ತಾತ್ರೆಯ ಪಿಸೆ ಮಾತನಾಡಿ, ಪೋಲಿಯೋ ವೈರಸ್‌ನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಬಾಧಿಸುತ್ತದೆ. ಕೈಕಾಲುಗಳ ಶಾಶ್ವತ ಅಂಗವೈಕಲ್ಯ ಉಂಟಾಗುತ್ತದೆ ಎಂದರು.
ತಾಲೂಕು ವೈದ್ಯಾಧಿಕಾರಿ ಅರವಿಂದ್ ಮಾತನಾಡಿ, ಐದು ವರ್ಷದೊಳಗಿನ ಮಕ್ಕಳ ಪೈಕಿ ನಗರದಲ್ಲಿ 4560, ಗ್ರಾಮೀಣ ಪ್ರದೇಶದಲ್ಲಿ 21706 ಜನರಿದ್ದಾರೆ. ಒಟ್ಟು 182 ಬೂತ್‌ಗಳು, 4 ಸಂಚಾರಿ ತಂಡಗಳ ಮೂಲಕ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪ್ರಯೋಗಾಲಯ ತಂತ್ರಜ್ಞರಾದ ವಿರೂಪಾಕ್ಷಿ, ಫರ್ಜಾನಾ, ಮಂಜುಳಾ, ಕರಿ ಬಸವರಾಜ್, ಇಂದಿರಮ್ಮ, ರೇಣುಕಮ್ಮ, ಗಣೇಶ್ ಇತರರಿದ್ದರು.