ಕೂಡ್ಲಿಗಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಆಯೋಜಿಸಿದ್ದ ಕಸಾಪ 112 ನೆ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಉದ್ಘಾಟಿಸಿದರು.  
ವಿಜಯನಗರ

ತಾಯಿ ಭಾಷೆಗೆ ನ್ಯಾಯ ಒದಗಿಸುವುದು ಅಗತ್ಯ

ಕೂಡ್ಲಿಗಿ: ಕನ್ನಡ ಭಾಷೆ ಯುವ ಪೀಳಿಗೆಗೆ ಮೂಲ ಮಂತ್ರವಾಗಬೇಕಿದೆ ಎಂದು ತಹಸೀಲ್ದಾರ್ ವಿ. ಕೆ.ನೇತ್ರಾವತಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ಜ್ಞಾನಮಂಟಪ ವಿದ್ಯಾಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಆಯೋಜಿಸಿದ್ದ 112 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಪ್ರಸ್ತುತ ಜಾಗತಿಕ ಬದಲಾವಣೆಯಲ್ಲಿ ನಾವು ಎಲ್ಲ ಭಾಷೆಗಳನ್ನು ಕಲಿಯಬೇಕಿದೆ. ಆದರೆ, ಕನ್ನಡವನ್ನು ಹೆಚ್ಚು ಬಳಸುವ ಮೂಲಕ ತಾಯಿ ಭಾಷೆಗೆ ನ್ಯಾಯ ಒದಗಿಸಬೇಕು. ಕನ್ನಡ ಭಾಷೆಗೆ ತನ್ನದೇ ಆದ ಮೌಲ್ಯ ಇದ್ದು, ಅನೇಕ ಸಾಹಿತಿಗಳು ದೇಶದ ಮೂಲೆ ಮೂಲೆಗೂ ಕನ್ನಡದ ಕಂಪನ್ನು ಪಸರಿಸಿದ್ದಾರೆ ಎಂದರು.
ಸಂಡೂರಿನ ಉರ್ದು ಶಾಲೆ ಮುಖ್ಯಶಿಕ್ಷಕಿ ಎ.ಸುಮಂಗಲಾ ವಿಶೇಷ ಉಪನ್ಯಾಸ ನೀಡಿ, 1915ರಲ್ಲಿ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯದಂತೆ ಎಚ್.ವಿ.ನಂಜುಂಡಯ್ಯ ನೇತೃತ್ವದಲ್ಲಿ ಕಸಾಪ ಸ್ಥಾಪನೆಯಾಯಿತು. ಕನ್ನಡ ಭಾಷೆಯನ್ನು ಪರಿಷ್ಕರಿಸಿ ಸಾಹಿತ್ಯವನ್ನು ಅಭಿವೃದ್ಧಿಪಡಿಸಿ ಸಮಾಜದ ವಿವಿಧ ಕ್ಷೇತ್ರಗಳಿಗೆ ಉಪಯುಕ್ತವಾಗುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿತ್ತು ಎಂದು ತಿಳಿಸಿದರು.
ಶತಮಾನಕ್ಕೂ ಹೆಚ್ಚು ಕಾಲ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಮತ್ತು ಸಾಹಿತ್ಯ ಸಮ್ಮೇಳನಗಳ ಮೂಲಕ ಭಾಷಾ ಪ್ರೇಮವನ್ನು ಜನರಲ್ಲಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಸಾಪ ಇಂದಿಗೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಂತ ಮಹತ್ವದ ಕೊಡುಗೆ ನೀಡುತ್ತಿರುವ ಸಂಸ್ಥೆಯಾಗಿದೆ. ತಾಲೂಕಿನಲ್ಲಿ ಹಿ.ಮ.ನಾಗಯ್ಯ, ಕೋ.ಚೆನ್ನಬಸಪ್ಪ, ಕುಂ.ವೀರಭದ್ರಪ್ಪ ಸೇರಿದಂತೆ ಅನೇಕರು ಸಾಹಿತ್ಯ ರಚನೆ ಮಾಡಿ ನಾಡಿನ ಸಾಹಿತ್ಯದ ಲೋಕಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕನ್ನಡ ಭಾಷಾ ಪ್ರೇಮಿಗಳಾದ ಸುಧಾಕರ ಹಾಗೂ ವೆಂಕಟೇಶ್ ಅವರನ್ನು ಸನ್ಮಾನ ಮಾಡಲಾಯಿತು. ಇದಕ್ಕೂ ಮುನ್ನ ಪೇಟೆ ಬಸವೇಶ್ವರ ಸಂಗೀತ ಪಾಠ ಶಾಲೆಯ ಶಿಕ್ಷಕ ಅಗಸಗಟ್ಟೆ ತಿಂದಪ್ಪ ತಂಡದಿಂದ ಸುಗಮ ಸಂಗೀತ ಗಾಯನ ಆಯೋಜನೆ ಮಾಡಲಾಗಿತ್ತು.
ಜ್ಞಾನಮಂಟಪ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಜಿ.ಉಮೇಶ್, ಕಸಪಾ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಸಿಡಿಪಿಒ ಮಾಲುಂಬಿ, ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಎಸ್.ಚಾರೇಶ್, ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಎಚ್.ವೀರಣ್ಣ, ಕಸಾಪ ತಾಲೂಕು ಕಾರ್ಯದರ್ಶಿ ನಂದಿ ಬಸವರಾಜ, ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ಶಿವರಾಜ್, ಎಸ್.ವಿ.ಸಿದ್ದರಾಧ್ಯ, ರಿಯಾಜ್ ಪಾಷಾ, ಕಜಾಪ ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್, ರಂಗಾ ರಾಘವೇಂದ್ರ ಶೆಟ್ಟಿ ಇದ್ದರು.