ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಶನಿವಾರ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಮಹಾ ಪರಿದಿಬ್ಬಣ ದಿನ ಆಚರಿಸಲಾಯಿತು. ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಚಿಂತಕ ಶಿವಸುಂದರ್, ಸಿಂಡಿಕೇಟ್ ಸದಸ್ಯ ಸೋಮಶೇಖರ್ ಬಣ್ಣದಮನೆ, ವಿಎಸ್‌ಕೆವಿವಿಯ ಸಿಂಡಿಕೇಟ್ ಸದಸ್ಯ ಪೀರ್ ಭಾಷಾ, ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ.ಚಿನ್ನಸ್ವಾಮಿ ಸೋಸಲೆ ಇತರರಿದ್ದರು. 
ವಿಜಯನಗರ

ಅಂಬೇಡ್ಕರ್ ವ್ಯಕ್ತಿತ್ವವನ್ನು ಕಟ್ಟಿಹಾಕಲು ಅಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನ ಸಾಂಸ್ಕೃತಿಕ ಚಿಂತಕ ಶಿವಸುಂದರ್ ಅಭಿಪ್ರಾಯ
ಹೊಸಪೇಟೆ: ದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ಮುಂದುವರೆಯುವಷ್ಟು ಕಾಲ ರಾಜಕೀಯ ಪ್ರಜಾತಂತ್ರಕ್ಕೆ ಮೌಲ್ಯವಿರುವುದಿಲ್ಲ. ರಾಜಕೀಯದಲ್ಲಿ ಭಕ್ತಿ ಎನ್ನವುದು ಸರ್ವಾಧಿಕಾರತ್ವವನ್ನು ತರುತ್ತದೆ ಎಂದು ಬೆಂಗಳೂರಿನ ಸಾಂಸ್ಕೃತಿಕ ಚಿಂತಕ ಶಿವಸುಂದರ್ ಅಭಿಪ್ರಾಯಪಟ್ಟರು.
ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ಕನ್ನಡ ವಿವಿಯ ಪಂಪ ಸಭಾಂಗಣದಲ್ಲಿ ಶನಿವಾರ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 69ನೇ ಮಹಾ ಪರಿದಿಬ್ಬಣ ದಿನಾಚರಣೆ ನಿಮಿತ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರದು ಬಹುಮುಖ ವ್ಯಕ್ತಿತ್ವ. ಅವರನ್ನು ಯಾವುದೇ ಒಂದು ನಿಲುವಿಗೆ ಕಟ್ಟಿಹಾಕಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಬೌದ್ಧ ಧರ್ಮವು ಬಹುಜನ ಹಿತಾಯ ಬಹುಜನ ಸುಖಾಯ ತತ್ವದ ಮೇಲೆ ನಿಂತಿರುವುದನ್ನು ತಿಳಿಸಿಕೊಟ್ಟರು. ಈಗ ಧರ್ಮಗಳು ಈ ಬಹುಜನ ಹಿತಾಯ ಬಹುಜನ ಸುಖಾಯ ತತ್ವದ ಮೇಲೆ ಪುನರ್ ರೂಪಿತವಾಗಬೇಕು ಎಂದರು.
ಜಾತಿ ವ್ಯವಸ್ಥೆ ಮತ್ತು ಬಂಡವಾಳಶಾಹಿಗಳು ದೇಶದಲ್ಲಿ ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆಗಳಿಗೆ ಕಾರಣವಾಗುತ್ತಿವೆ. ಇದರಿಂದ ಪ್ರಜಾಪ್ರಭುತ್ವಗಳು ಸಾಮಾಜಿಕವಾಗಿ ಸಾಯುತ್ತಿವೆ ಮತ್ತು ಚುನಾವಣಾ ಪ್ರಜಾತಂತ್ರವನ್ನು ಟೊಳ್ಳು ಮಾಡುತ್ತಿದೆ. ಇದು ಜನರ ಬದುಕು ಅತಂತ್ರವಾಗಲು ಕಾರಣವಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿಗೆ ಯಾವ ಪಕ್ಷಗಳು ಕೂಡ ಸಮಾಜದ ಒಳತಿನ ಕಡೆಗೆ ಗಮನಹರಿಸುತ್ತಿಲ್ಲ. ಅಧಿಕಾರ ಹಂಚಿಕೆಯಲ್ಲೇ ಕಾಲ ಕಳೆಯುವುದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ. ಎಲ್ಲರು ಬದುಕಿನಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದರಿಂದ ಸಮಾಜ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು.