ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಉದ್ಘಾಟಿಸಿದರು. ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಸ್.ತಿಪ್ಪೇಸ್ವಾಮಿ, ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ಹೈದ್ರಾಬಾದ್‌ನ ಇಎಫ್‌ಎಲ್‌ಯು ಪ್ರಾಧ್ಯಾಪಕ ತಾರಕೇಶ್ವರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಕುಲಸಚಿವ ವಿರೂಪಾಕ್ಷ ಪೂಜಾರಹಳ್ಳಿ ಇತರರಿದ್ದರು.
- ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಕರೆ
ಹೊಸಪೇಟೆ: ಪ್ರವಾಸಿ ಮಾರ್ಗದರ್ಶಿಗಳು ಕೇವಲ ಮಾಹಿತಿ ನೀಡುವವರಲ್ಲ, ಬದಲಿಗೆ ದೇಶದ ಸಾಂಸ್ಕೃತಿಕ ರಾಯಭಾರಿಗಳು. ಅವರು ವಿದೇಶಿ ಭಾಷಾ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡು, ಹಂಪಿಯ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಕರೆ ನೀಡಿದರು.
ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ವಿವಿಯ ಸಹಯೋಗದಲ್ಲಿ ಮಂಟಪ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪ್ರವಾಸಿ ಮಾರ್ಗದರ್ಶಿಗಳ ವಿದೇಶಿ ಭಾಷಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರವಾಸಿಗರೊಂದಿಗೆ ಪ್ರಾಮಾಣಿಕತೆ ಮತ್ತು ಆತ್ಮೀಯತೆಯಿಂದ ವರ್ತಿಸಬೇಕು. ಅವರಿಂದ ಹೆಚ್ಚಿನ ಹಣ ವಸೂಲಿ ಮಾಡದೆ, ಸುರಕ್ಷತೆಗೆ ಆದ್ಯತೆ ನೀಡಿ ವೃತ್ತಿಪರತೆ ಕಾಯ್ದುಕೊಳ್ಳಬೇಕು. ಹಂಪಿಯ ಇತಿಹಾಸ ವಿವರಿಸುವಾಗ ಕಾಲ್ಪನಿಕ ಕಥೆಗಳಿಗೆ ಆಸ್ಪದ ನೀಡದೆ, ಸಂಶೋಧನಾಧಾರಿತ ಮತ್ತು ಅಧಿಕೃತ ಇತಿಹಾಸವನ್ನು ಮಾತ್ರ ಪ್ರವಾಸಿಗರಿಗೆ ತಲುಪಿಸಬೇಕು. ಹಂಪಿಗೆ ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ರಷ್ಯನ್ ಸೇರಿದಂತೆ ವಿವಿಧ ದೇಶಗಳ ಪ್ರವಾಸಿಗರು ಬರುತ್ತಾರೆ. ಅವರಿಗೆ ಅವರದ್ದೇ ಭಾಷೆಯಲ್ಲಿ ಇಲ್ಲಿನ ವೈಭವವನ್ನು ವಿವರಿಸಿದಾಗ ಪ್ರವಾಸ ಸಾರ್ಥಕವಾಗುತ್ತದೆ. ಡಿಜಿಟಲ್ ಯುಗಕ್ಕೆ ತಕ್ಕಂತೆ ಮಾರ್ಗದರ್ಶಿಗಳು ಡಿಜಿಟಲ್ ಪೇಮೆಂಟ್ ಹಾಗೂ ಆನ್‌ಲೈನ್ ಬುಕಿಂಗ್‌ಗಳ ಬಗ್ಗೆಯೂ ಜ್ಞಾನ ಹೊಂದಿರಬೇಕು ಎಂದರು.