ಆರ್.ಮಂಜುನಾಥ 
ವಿಜಯನಗರ

ಪಕ್ಷಾತೀತವಾಗಿ ಶಾಸಕರು ಕಮಿಷನ್ ದಂಧೆಕೋರರು

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ ಆರೋಪ
ಹೊಸಪೇಟೆ: ಬೇಡಿಕೆ ಈಡೇರಿಸಲು ಆಗ್ರಹಿಸಿ ಮಾ.06ರುಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬರಲಿರುವ ಗುತ್ತಿಗೆದಾರರ ಸಹಿತ ಒಂದು ದಿನದ ಮುಷ್ಕರ ನಡೆಸಲಾಗುವುದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಅಂದು ರಾಜ್ಯದೆಲ್ಲೆಡೆ ಕಾಮಗಾರಿಗಳು ಸ್ಥಗಿತಗೊಂಡಿರುತ್ತವೆ. ಸರ್ಕಾರ ಅಗಲೂ ಸ್ಪಂದಿಸದಿದ್ದರೆ ಎಪ್ರಿಲ್‌ನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಾಮಗಾರಿ ಮುಗಿದ ನಂತರ ಬಿಲ್ ಪಾವತಿ ವೇಳೆ ಕಮಿಷನ್ ಪಡೆಯುವ ಕಾಲ ಈಗ ಹೊರಟುಹೋಗಿದೆ, ಮೊದಲೇ ಕಮಿಷನ್ ನೀಡಬೇಕಾಗಿದೆ. ಗುದ್ದಲಿ ಪೂಜೆ ಮಾಡುವ ಹಂತದಲ್ಲೇ ಶಾಸಕರಿಗೆ ಕಮಿಷನ್ ನೀಡಬೇಕಾಗುತ್ತದೆ, ಅಧಿಕಾರಿಗಳು ಇಲ್ಲಿ ಮಧ್ಯವರ್ತಿಗಳಾಗಿ ವರ್ತಿಸಿ ಗುತ್ತಿಗೆದಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ರಾಜ್ಯದಲ್ಲಿ ಪಕ್ಷಾತೀತವಾಗಿ ಶಾಸಕರು ಕಮಿಷನ್ ದಂಧೆಕೋರರಾಗಿದ್ದಾರೆ. ಶೇ 30ರಿಂದ 40ರಷ್ಟು ಶಾಸಕರಂತೂ ಇದರಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇವೆ. ಅದರ ಭಾಗವಾಗಿಯೇ ಶಿರಹಟ್ಟಿ ಶಾಸಕರು ಸಿಕ್ಕಿಬಿದ್ದಿದ್ದಾರೆ ಎಂದರು.
ಈ ಹಿಂದಿನ ಸರ್ಕಾರದಲ್ಲಿ ಶೇ.40ರಷ್ಟು ಕಮಿಷನ್ ಇತ್ತು, ಈ ಸರ್ಕಾರದಲ್ಲಿ ಶೇ 60ರಷ್ಟು ಕಮಿಷನ್ ದಂಧೆ ಇದೆ ಎಂದು ನಾನು ಹೇಳಿಲ್ಲ, ನನ್ನ ಮಾತನ್ನು ತಿರುಚಲಾಗಿದೆ. ಆದರೆ ಈ ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಚೆನ್ನಾಗಿ ಬಳಸಿಕೊಂಡಿದ್ದು ನಿಜ. ಆದರೆ ನಾವು ಸಹ ಅದೇ ಹಾದಿ ತುಳಿದಿಲ್ಲ. ಗುತ್ತಿಗೆದಾರರ ಬಾಕಿ ಬಿಲ್ ಮೊತ್ತ 37 ಸಾವಿರ ಕೋಟಿ ರೂ. ತಕ್ಷಣ ಕೊಡಿ ಎಂಬುದಷ್ಟೇ ನಮ್ಮ ಬೇಡಿಕೆ ಎಂದರು.
ಪ್ರಮುಖರಾದ ನಾಗಪ್ಪ, ರಾಜಶೇಖರ ಪಾಟೀಲ್, ಜಗದೀಶ್, ಕಿಚಡಿ ಶ್ರೀನಿವಾಸ್, ಕೇಶವ ರೆಡ್ಡಿ, ನಾಗರಾಜ, ಮಹೇಶ್ ಹಲಗೇರಿ, ಉಮಾಕಾಂತ್, ದೇವಿಪ್ರಸಾದ್ ಇದ್ದರು.