ಹೊಸಪೇಟೆಯಲ್ಲಿ ಶುಕ್ರವಾರ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಬೈಕ್ ರ‍್ಯಾಲಿ ನಡೆಯಿತು.
- ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅಭಿಪ್ರಾಯ
ಹೊಸಪೇಟೆ: ನಿಯಮಿತವಾಗಿ ಪ್ರಾಣಾಯಾಮ ಮತ್ತು ಯೋಗಾಸನಗಳನ್ನು ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ತಿಳಿಸಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತ ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ಪತಂಜಲಿ ಯೋಗ ಸಮಿತಿಗಳ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಯೋಗವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ವೃದ್ಧಿಸುತ್ತದೆ. ಪ್ರತಿಯೊಬ್ಬರೂ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು ಎಂದರು.
ಜೂ.21ರAದು ಬೆಳಿಗ್ಗೆ 6.30ರಿಂದ 8.00ರವರೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯ ಯೋಗ ದಿನಾಚರಣೆ ನಡೆಯಲಿದೆ. ಈ ಸಮಾರಂಭದಲ್ಲಿ ಏಕಕಾಲಕ್ಕೆ 2 ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡು ಯೋಗಾಭ್ಯಾಸ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಯಶಸ್ವಿಗೊಳಿಸಬೇಕು ಎಂದರು.
ರ‍್ಯಾಲಿಯು ಫ್ರೀಡಂ ಪಾರ್ಕ್ನಿಂದ ಹೊರಟು ಬಸ್ ನಿಲ್ದಾಣ, ಬಳ್ಳಾರಿ ರಸ್ತೆ, ವಡಕರಾಯ ದೇಗುಲ, ಮದಕರಿ ವೃತ್ತ, ವಾಲ್ಮೀಕಿ ವೃತ್ತ, ಸರ್ಕಾರಿ ಆಸ್ಪತ್ರೆ, ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ ಹಾಗೂ ಪುನೀತ್ ರಾಜಕುಮಾರ್ ವೃತ್ತದ ಮೂಲಕ ಮರಳಿ ಮೂಲ ಸ್ಥಾನಕ್ಕೆ ಮುಕ್ತಾಯಗೊಂಡಿತು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಮಾನಸ ಅಕ್ಕ, ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಗುರುಬಸವರಾಜ್, ಡಾ. ಮುನಿವಾಸುದೇವರೆಡ್ಡಿ, ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ.ಬಿ.ವಿ.ಭಟ್, ಪತಂಜಲಿ ಯೋಗ ಸಮಿತಿಯ ಬಾಲಚಂದ್ರ ಶರ್ಮಾ, ಪ್ರೊ.ಎಫ್.ಟಿ.ಹಳ್ಳಿಕೇರಿ, ರಾಜೇಶ್ ಕರ್ವಾ, ಅನಂತ ಜೋಶಿ, ಶ್ರೀಧರ್, ಶ್ರೀನಿವಾಸ ಮಂಚಿಕಟ್ಟಿ, ಸತ್ಯಪ್ಪ, ಶ್ರೀರಾಮ , ಶಿವಮೂರ್ತಿ, ವೆಂಕಟೇಶ್ ವಾಸಿ, ನಾಗರತ್ನ, ಅಶೋಕ ಚಿತ್ರಗಾರ ಇತರರಿದ್ದರು.