ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಪದಾಧಿಕಾರಿಗಳು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮನವಿ ಸಲ್ಲಿಸಿದರು. ಪ್ರಮುಖರಾದ ಎಚ್.ಎಂ.ಸAತೋಷ್, ರೇಣುಕಮ್ಮ, ಗಂಗಾಧರ, ಕೊಟ್ರೇಶ್, ರೇಣುಕ, ದಂಡೆಮ್ಮ, ದಡೇರಪ್ಪ ದೊಡ್ಡ ಮಲ್ಲೇಶ್, ಕೆ.ವೆಂಕಟಮ್ಮ, ಶಿವು, ಮಂಜಮ್ಮ, ಹುಲಿಗೆಮ್ಮ ತುಂಬರಗುದ್ದಿ, ಮಂಜುನಾಥ, ಮಮತಾ, ನಾಗಪ್ಪ, ಕೊಟ್ರೇಶ್, ಅಶೋಕ್, ಹನುಮಂತಪ್ಪ ಇತರರಿದ್ದರು.
ಹೊಸಪೇಟೆ: ದೇವದಾಸಿ ಪದ್ಧತಿಯಿಂದ ನೊಂದ ಮಹಿಳೆಯರಿಗಾಗಿ ಬಜೆಟ್‌ನಲ್ಲಿ ಘೋಷಿಸಿದ ವಿಶೇಷ ಪ್ಯಾಕೇಜ್ ಅನ್ನು ತಕ್ಷಣ ಜಾರಿಗೊಳಿಸಬೇಕು ಮತ್ತು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದಿಂದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರ ಮುಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ರವಾನಿಸಿದರು.
ದೇವದಾಸಿ ಮಹಿಳೆಯರ ಮಾಸಿಕ ಶಾಸನವನ್ನು 2 ಸಾವಿರ ರೂಪಾಯಿಂದ 5 ಸಾವಿರ ರೂಪಾಯಿಗೆ ಏರಿಸಬೇಕು, 45 ವರ್ಷದ ವಯೋಮಿತಿ ಸಡಿಲಿಸಿ ಗುರುತಿಸಲ್ಪಟ್ಟ ಎಲ್ಲಾ ಮಾಜಿ ದೇವದಾಸಿಯರಿಗೆ ಪಿಂಚಣಿ ನೀಡಬೇಕು. ಜತೆಗೆ ಭೂರಹಿತ ಕುಟುಂಬಗಳಿಗೆ ಕೃಷಿ ಭೂಮಿ, ಉಚಿತ ಶಿಕ್ಷಣ, ವಸತಿ ಸೌಲಭ್ಯ ಹಾಗೂ ಉದ್ಯೋಗಗಳಲ್ಲಿ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡು ಮೆಕ್ಕೆಜೋಳ, ಶೇಂಗಾ ಬೆಳೆಗಳು ನಾಶವಾಗಿವೆ. ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ತೀವ್ರಗೊಂಡಿದ್ದು, ಗ್ರಾಮೀಣ ಭಾಗದ ಶ್ರಮಿಕರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಆಗ್ರಹಿಸಿದರು.
ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ತಕ್ಷಣ ಪರಿಹಾರ ಬಿಡುಗಡೆ ಮಾಡುವುದು. ಗ್ರಾಮೀಣ ವಲಸೆ ತಡೆಯಲು ಉದ್ಯೋಗ ಭದ್ರತೆ ಹಾಗೂ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವುದು. ವಿಜಯನಗರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವುದು. ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ನೀಗಿಸುವುದು. ತುಳಿತಕ್ಕೊಳಗಾದ ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಿಸಿ, ರೈತರು ಹಾಗೂ ಶ್ರಮಿಕರ ಹಿತ ಕಾಯಲು ಜಿಲ್ಲಾಡಳಿತ ಹಾಗೂ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.