ಹರಪನಹಳ್ಳಿ ರಾಗಿ ಖರೀದಿ ಕೇಂದ್ರದಿಂದ ಗೋದಾಮುಗಳಿಗೆ ತೆರಳುವ ಲಾರಿಗಳ ಸಂಖ್ಯೆ ಹೆಚ್ಚಿಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು ಸ್ಥಳಕ್ಕೆ ಭೇಟಿ ನೀಡಿದ್ದರು.
ಹರಪನಹಳ್ಳಿ: ನಗರದ ಕೃಷಿ ಮಾರುಕಟ್ಟೆಯಲ್ಲಿರುವ ರಾಗಿ ಖರೀದಿ ಕೇಂದ್ರದಿಂದ ಗೋದಾಮುಗಳಿಗೆ ತೆರಳುವ ಲಾರಿಗಳ ಸಂಖ್ಯೆ ಹೆಚ್ಚಿಸಬೇಕೆಂದು ಒತ್ತಾಯಿಸಿ ರೈತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಳೆದ ಎರಡ್ಮೂರು ದಿನಗಳಿಂದ ನಮ್ಮ ಟ್ರ್ಯಾಕ್ಟರ್‌ಗಳನ್ನು ಕೃಷಿ ಮಾರುಕಟ್ಟೆಯಲ್ಲಿ ನಿಲ್ಲಿಸಿ ರಾತ್ರಿಯಿಡಿ ಕಾಯುವ ಪರಿಸ್ಥಿತಿ ಇದೆ. ತೆಲಿಗಿ ಅಥವಾ ಅರಸೀಕೆರೆ ಹೋಬಳಿಯಲ್ಲಿ ಹೆಚ್ಚುವರಿ ರಾಗಿ ಖರೀದಿ ಕೇಂದ್ರ ನಿರ್ಮಿಸಬೇಕೆಂದು ರೈತರು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು, ರಾಗಿ ಖರೀದಿ ಕೇಂದ್ರದಿಂದ ನೀಡಿರುವ ಟೋಕನ್ ಸಂಖ್ಯೆ ಪ್ರಕಾರ ಬಾರದೆ ಅನಾವಶ್ಯಕ ಗೊಂದಲ ಸೃಷ್ಟಿಸುತ್ತಿದ್ದೀರಿ. ರಾಗಿ ಖರೀದಿ ನಂತರ ಗೋದಾಮಿ ತೆರಳಲು ಈಗಾಗಲೇ ನಿತ್ಯ 6 ಲಾರಿಗಳನ್ನು ಮೀಸಲಿರಿಸಲಾಗಿದೆ. ರೈತರು ಟೋಕನ್ ಸಂಖ್ಯೆ ಪ್ರಕಾರ ಬಂದರೆ ಎರಡ್ಮೂರು ದಿನ ಕಾಯಬೇಕಾದ ಅಗತ್ಯವಿಲ್ಲ. ರೈತರ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಮತ್ತೊಂದು ಲಾರಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಅಗತ್ಯವಿರುವ ಹೋಬಳಿ ಭಾಗದಲ್ಲಿ ಇನ್ನೊಂದು ರಾಗಿ ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.