ಕೂಡ್ಲಿಗಿ ತಾಲೂಕಿನ ಮೊರಬ ಬಳಿ ಸಚಿವ ಜಮೀರ್ ಅಹಮದ್ ಖಾನ್ ರೈತ ಮಹಿಳೆ ಗೌಡ್ರು ಶಾಂತಲಿಂಗಮ್ಮ ಅವರಿಗೆ ವಿಚಾರಿಸಿದರು. ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಕ್ರಂ ಅಲಿ ಇತರರಿದ್ದರು. 
ವಿಜಯನಗರ

ಬಿಡಿಗಾಸೂ ಸಿಗದಾಯ್ತು, ಕೈ ಮುಗಿದು ಬೇಡ್ತೀವಿ ಸಹಾಯ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಸಚಿವ ಜಮೀರ್ ಮುಂದೆ ಕಣ್ಣೀರಿಟ್ಟ ವಿಜಯನಗರ ರೈತರು
ಹೊಸಪೇಟೆ: ಮೈಮೇಲಿದ್ದ ಒಡವೆ ಅಡವಿಟ್ಟು ಬಿತ್ತಿದ್ವಿ ಸಾಹೇಬ್ರೇ... ಮಳೆರಾಯ ಮುನಿದು ಬೆಳೆಯೆಲ್ಲ ಸೀದುಹೋಯ್ತು... ಮನೆ ಕಾಯೋಕೆ ದನಕರುಗಳಿಗೂ ಮೇವಿಲ್ಲ, ಹೊಟ್ಟೆಗೆ ಹಿಟ್ಟೂ ಇಲ್ಲ... ನೀವೇ ನಮ್ಮ ಕೈ ಹಿಡಿಯಬೇಕು...' ಹೀಗೆಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕೈ ಹಿಡಿದು, ಗೋಗರೆದು ಕಣ್ಣೀರಿಡುತ್ತಿರುವುದು ಬೇರ ಯಾರೂ ಅಲ್ಲ, ಮಳೆರಾಯನ ಕಣ್ಣಾಮುಚ್ಚಾಲೆಗೆ ಸಿಲುಕಿ ಬದುಕನ್ನೇ ಪಣಕ್ಕಿಟ್ಟಿರುವ ವಿಜಯನಗರ ಜಿಲ್ಲೆಯ ಕಂಗಾಲಾದ ರೈತರು!
ಮುಂಗಾರು ಸಂಪೂರ್ಣ ಕೈಕೊಟ್ಟು ಭೂಮಿ ಬಿರುಕು ಬಿಟ್ಟಿದೆ. ಸಾಲ-ಸೋಲ ಮಾಡಿ, ಮೈಮೇಲಿದ್ದ ಆಭರಣಗಳನ್ನು ಮಾರಿ ಜಮೀನಿಗೆ ಸುರಿದಿದ್ದ ಬೀಜ-ಗೊಬ್ಬರದ ಹಣವೂ ಈಗ ಬೂದಿಯಾಗಿದೆ. ಬೆಳೆದ ಬೆಳೆಯೆಲ್ಲ ಕಣ್ಣೆದುರೇ ಒಣಗಿ ಬೂದಿಯಾಗುತ್ತಿದ್ದರೆ, ಕುಡಿಯಲು ನೀರಿಲ್ಲದೆ, ದನ-ಕರುಗಳಿಗೆ ಮೇವಿಲ್ಲದೆ ದಾರಿ ಕಾಣದಂತಾಗಿರುವ ರೈತರು ಈಗ ಸರ್ಕಾರದ ಮುಂದೆ ಕೈಮುಗಿದು ಅಳಲು ತೋಡಿಕೊಳ್ಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಬರ ವೀಕ್ಷಣೆಗೆ ಆಗಮಿಸಿದ ವೇಳೆ, ಇಂದೋ ನಾಳೆಯೋ ಮಳೆ ಬಂದೀತು ಎಂದು ಮೈಮೇಲಿದ್ದ ಅಲ್ಪಸ್ವಲ್ಪ ಬಂಗಾರ, ಬೆಳ್ಳಿ ಒಡವೆಗಳನ್ನು ಅಡಮಾನವಿಟ್ಟು, ಸಾಲ ಸೋಲ ಮಾಡಿ ಜಮೀನಿಗೆ ಹಾಕಿವಿ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭೀಕರ ಬರ ಪರಿಸ್ಥಿತಿ ಆವರಿಸಿದ್ದು, ಬೆಳೆಗಳೆಲ್ಲ ಒಣಗಿಬೀಡಾಡಿಯಾಗಿವೆ. ನಮ್ಮನ್ನಾದರೂ ಉಳಿಸಿ, ಇಲ್ಲವೇ ವಿಷ ನೀಡುವ ವ್ಯವಸ್ಥೆ ಮಾಡಿ ಎನ್ನುವಂತೆ ರೈತ ಮಹಿಳೆ ಶಾಂತಲಿಂಗಮ್ಮ ಸೇರಿದಂತೆ ನೂರಾರು ಕೃಷಿಕರು ಬೇಡಿಕೊಂಡ ದೃಶ್ಯ ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುವಂತಿತ್ತು.
ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮಕ್ಕೆ ಭೇಟಿ ನೀಡಿದ ಸಚಿವರು, ರೈತ ಮಹಿಳೆ ಗೌಡ್ರು ಶಾಂತಲಿಂಗಮ್ಮ ಅವರ ಜಮೀನಿಗೆ ತೆರಳಿ ಒಣಗಿ ಹೋಗಿರುವ ಮುಸುಕಿನ ಜೋಳ, ಮೆಕ್ಕೆಜೋಳ ಹಾಗೂ ಸಜ್ಜೆ ಬೆಳೆಗಳನ್ನು ವೀಕ್ಷಿಸಿದರು. ಈ ವೇಳೆ ಸಚಿವರ ಕೈ ಹಿಡಿದು ತಮ್ಮ ಅಳಲು ತೋಡಿಕೊಂಡ ಶಾಂತಲಿಂಗಮ್ಮ, ಎಂದೂ ಕಾಣದ ಭೀಕರ ಬರ ಬಂದಿದೆ ಸ್ವಾಮಿ. ಮನೆಯಲ್ಲಿದ್ದ ರೊಕ್ಕವನ್ನೆಲ್ಲ ಹೊಲಕ್ಕೆ ಹಾಕಿದ್ದೇವೆ, ಮಳೆ ಇಲ್ಲದೆ ಬಿಡಿಗಾಸು ಬರದಂತಾಗಿದೆ. ನಮ್ಮ ಕಷ್ಟಕ್ಕೆ ನೀವೇ ಆಸರೆಯಾಗಬೇಕು ಎಂದು ಗೋಗರೆದರು.
ಅಂತೆಯೇ ಮತ್ತೊಬ್ಬ ರೈತ ವೀರಣ್ಣ ಮಾತನಾಡಿ, ಕಳೆದ ಎರಡು ತಿಂಗಳಿಂದ ಮಳೆಯಿಲ್ಲದೆ ಬೆಳೆ ಮೊಟುಕಾಗಿದೆ. ಸದ್ಯ ಮಳೆ ಬಂದರೂ ಕಾಳು ಕಟ್ಟುವುದಿಲ್ಲ, ದನ-ಕರುಗಳಿಗೆ ಮೇವಿಲ್ಲ. ಬೆಳೆ ಪರಿಹಾರ ನೀಡಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ಎಂದು ಕೈಮುಗಿದು ಮನವಿ ಮಾಡಿದರು.
ಸ್ಥಳದಲ್ಲಿದ್ದ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಕೂಡ್ಲಿಗಿ ತಾಲೂಕಿನಲ್ಲಿ ಶೇ. 80ರಷ್ಟು ಬೆಳೆ ನಾಶವಾಗಿದೆ. ತಾಲೂಕನ್ನು ತಕ್ಷಣವೇ ಬರಪೀಡಿತ ಪಟ್ಟಿಗೆ ಸೇರಿಸಿ, ಕೃಷಿ ಕೂಲಿ ಕಾರ್ಮಿಕರು ಗುಳೆ ಹೋಗುವುದನ್ನು ತಡೆಯಲು ಸರ್ಕಾರ ಯುದ್ಧೋಪಾದಿಯಲ್ಲಿ ಯೋಜನೆ ರೂಪಿಸಬೇಕು ಎಂದು ಸಚಿವರಿಗೆ ವಿನಂತಿಸಿದರು. ಕೊಟ್ಟೂರು ತಾಲೂಕಿನ ಗಜಾಪುರ ಬಳಿಯೂ ಸಚಿವರು ಬೆಳೆ ಹಾನಿ ಪರಿಶೀಲನೆ ನಡೆಸಿದರು.
ರೈತರ ಗೋಳು ಆಲಿಸಿದ ಸಚಿವ ಜಮೀರ್ ಅಹಮ್ಮದ್ ಖಾನ್, ಯಾರೂ ಆತಂಕ ಪಡಬಾರದು ಎಂದು ಧೈರ್ಯ ತುಂಬಿದರು. ವಿಮೆ ಮಾಡಿಸಿದ ಹಾಗೂ ಮಾಡಿಸದ ರೈತರ ಪಟ್ಟಿಯನ್ನು ಶೀಘ್ರ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಜಿಲ್ಲೆಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ರೈತರಿಗೆ ಪರಿಹಾರ ಸೇರಿದಂತೆ ಸರ್ಕಾರದಿಂದ ಆಗಬೇಕಾದ ಎಲ್ಲಾ ನೆರವನ್ನು ಜರೂರಾಗಿ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.