ಕೂಡ್ಲಿಗಿ ತಾಲೂಕಿನ ತುಪ್ಪಾಕನಹಳ್ಳಿಯಲ್ಲಿ ಅಖಿಲ ಭಾರತ ಕಿಸಾನ್ ಸಭಾ ಗ್ರಾಮ ಘಟಕಕ್ಕೆ ಚಾಲನೆ ನೀಡಲಾಯಿತು.  
ವಿಜಯನಗರ

ಅಧಿಕಾರಕ್ಕೆ ಬಂದ ಬಳಿಕ ಭರವಸೆ ಹುಸಿ

ಅಶೋಕ್ ಕುಮಾರ್ ಎನ್
ಕೂಡ್ಲಿಗಿ: ರೈತರು ದೇಶದ ಬೆನ್ನೆಲುಬು ಎಂದು ಹೇಳುವ ರಾಜಕಾರಣಿಗಳು ಸೌಲಭ್ಯಗಳನ್ನು ನೀಡುವಲ್ಲಿ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದು ಈ ದೇಶದ ದುರಂತ ಎಂದು ಅಖಿಲ ಭಾರತ ಕಿಸಾನ್ ಸಭಾ ರಾಜ್ಯ ಉಪಾಧ್ಯಕ್ಷ ಎಚ್.ವೀರಣ್ಣ ಹೇಳಿದರು.
ತುಪ್ಪಕ್ಕನಹಳ್ಳಿ ಗ್ರಾಮದಲ್ಲಿ ಅಖಿಲ ಭಾರತ ಕಿಸಾನ್ ಸಭಾ ಗ್ರಾಮ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜಕಾರಣಿಗಳು ಚುನಾವಣೆಯಲ್ಲಿ ರೈತರಿಗೆ ಇನ್ನಿಲ್ಲದ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬರುತ್ತಾರೆ. ಅಧಿಕಾರಕ್ಕೆ ಬಂದ ನಂತರ ರೈತರಿಗೆ ಸೌಲಭ್ಯಗಳನ್ನು ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಎಪಿಎಂಸಿ ಇದ್ದರೂ ಹೊರಗಿನ ಖರೀದಿದಾರರು ಬರುತ್ತಿಲ್ಲ. ಇದರಿಂದಾಗಿ ವ್ಯಾಪಾರಿಗಳು ಏಕಪಕ್ಷೀಯವಾಗಿ ದರ ನಿಗದಿ ಮಾಡಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಎಪಿಎಂಸಿಯಲ್ಲಿ ರೈತರಿಗೆ ಉಪಯೋಗವಾಗುವ ಯಾವುದೇ ಸೌಲಭ್ಯಗಳು ಇಲ್ಲ. ಈ ಭಾಗದಲ್ಲಿ ರೇಷ್ಮೆ ಯಥೇಚ್ಛವಾಗಿ ಬೆಳೆಯಲಾಗುತ್ತದೆ. ಆದರೆ ಇಲಾಖೆಯಲ್ಲಿ ಸಿಬ್ಬಂದಿ ಇಲ್ಲ. ರೈತರಿಗೆ ಬೆಳೆ ಬೆಳೆಯಲು ಮಾರ್ಗದರ್ಶನ ನೀಡುವವರೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂಗಾರು ಸಮಯದಲ್ಲಿ ಸಬ್ಸಿಡಿ ಬಿತ್ತನೆ ಬೀಜ, ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೂ ಅಧಿಕಾರಿಗಳು ಕಂಡು ಕಾಣದಂತೆ ಇರುತ್ತಾರೆ. ಗುಂಡಿನ ಹೊಳೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಲು 50 ಎಕರೆ ಭೂಮಿ ಮಂಜೂರಾಗಿದ್ದರು ಕಾಮಗಾರಿ ಆರಂಭವಾಗಿಲ್ಲ ಎಂದು ದೂರಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಕರಿಯಪ್ಪ, ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಉಪಾಧ್ಯಕ್ಷ ಜಿ.ಬಾಲರಾಜ್, ಗ್ರಾಮ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ, ಸಿರಿಯಪ್ಪ, ವಿಜಯಕುಮಾರ್, ನಾಗಪ್ಪ, ಮೂಗಪ್ಪ, ದೊಡ್ಡಪ್ಪ, ಬಾಲಪ್ಪ ಇತರರಿದ್ದರು.