ಎಸ್ಪಿ ಎಸ್.ಜಾಹ್ನಾವಿ ಮೊಬೈಲ್ ನ್ಯಾಯ ವಿಧಿ ವಿಜ್ಞಾನ ಪ್ರಯೋಗಾಲಯದ ಕಿಟ್ ಪರಿಶೀಲನೆ ನಡೆಸಿದರು. ಎಎಸ್ಪಿ ಮಂಜುನಾಥ, ಡಿವೈಎಸ್ಪಿ ಪಿ.ಮುರಳಿಧರ್, ಆರ್ ಪಿ ಪಿಐ ಗೋವಿಂದ್ ಇತರರಿದ್ದರು.
- ಬರಲಿದೆ ಆನ್ ದಿ ಸ್ಪಾಟ್ ಎಫ್‌ಎಸ್‌ಎಲ್ ಲ್ಯಾಬ್!
- ವೈಜ್ಞಾನಿಕ ಸಾಕ್ಷ್ಯಗಳನ್ನು ಕಲೆಹಾಕಿ, ತನಿಖೆಗೆ ವೇಗ ನೀಡಲು ಸಹಕಾರಿ
- ರಸ್ತೆಗಿಳಿಯಲಿದೆ ಮೊಬೈಲ್ ನ್ಯಾಯ ವಿಧಿ ವಿಜ್ಞಾನ ಪ್ರಯೋಗಾಲಯ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಅಪರಾಧ ಪ್ರಕರಣಗಳನ್ನು ಭೇದಿಸಲು ಸುದೀರ್ಘ ಕಾಯುವಿಕೆ ಮತ್ತು ವಿಳಂಬಕ್ಕೆ ಮುಕ್ತಿ ನೀಡಲು ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನದತ್ತ ಹೆಜ್ಜೆ ಇಟ್ಟಿದೆ. ಹತ್ಯೆ, ದರೋಡೆ, ಡಿಜಿಟಲ್ ಅಪರಾಧಗಳಂತಹ ಪ್ರಕರಣಗಳು ನಡೆದಾಗ ಸ್ಥಳದಲ್ಲೇ ವೈಜ್ಞಾನಿಕ ಸಾಕ್ಷ್ಯಗಳನ್ನು ಕಲೆಹಾಕಿ, ತನಿಖೆಗೆ ವೇಗ ನೀಡಲು ಮೊಬೈಲ್ ನ್ಯಾಯ ವಿಧಿ ವಿಜ್ಞಾನ ಪ್ರಯೋಗಾಲಯ ವಾಹನಗಳು ರಸ್ತೆಗೆಳಿದಿದೆ.
ಅಪರಾಧ ಪ್ರಕರಣಗಳ ತನಿಖೆಯಲ್ಲಿ ಹೈಟೆಕ್ ತಂತ್ರಜ್ಞಾನದ ಸ್ಪರ್ಶ ನೀಡಲು ಮತ್ತು ಅಪರಾಧಿಗಳಿಗೆ ತಕ್ಷಣವೇ ಬಲೆ ಬೀಸಲು ಪೊಲೀಸ್ ಇಲಾಖೆ ಹಾಗೂ ವಿಧಿವಿಜ್ಞಾನ ಇಲಾಖೆ (ಎಫ್ಎಸ್ಎಲ್) ದೈತ್ಯ ಹೆಜ್ಜೆ ಇಟ್ಟಿದ್ದು, ಜಿಲ್ಲಾದ್ಯಾಂತ ಶೀಘ್ರದಲ್ಲೇ ಸುಧಾರಿತ ಮೊಬೈಲ್ ನ್ಯಾಯ ವಿಧಿ ವಿಜ್ಞಾನ ಪ್ರಯೋಗಾಲಯ ಸಂಚಾರ ಆರಂಭಿಸಲಿದೆ. ಘಟನಾವಳಿಗಳು ನಡೆದ ಸ್ಥಳದಲ್ಲೇ ಸೆಕೆಂಡುಗಳಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಪ್ರಾಥಮಿಕ ತನಿಖಾ ವರದಿಯನ್ನು ಸ್ಥಳದಲ್ಲೇ ನೀಡುವ ಸಾಮರ್ಥ್ಯ ಈ ಹೈಟೆಕ್ ವಾಹನಗಳಿಗಿರುವುದು ಇದರ ವಿಶೇಷತೆ. ಇದು ಕೇವಲ ಒಂದು ಸಾಮಾನ್ಯ ವಾಹನವಲ್ಲ. ಸಂಚರಿಸುವ ಹೈಟೆಕ್ ವಿಧಿವಿಜ್ಞಾನ ಪ್ರಯೋಗಾಲಯವಾಗಿದೆ. ಸಾಮಾನ್ಯವಾಗಿ ಅಪರಾಧ ನಡೆದ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ನಗರಗಳಲ್ಲಿರುವ ಮುಖ್ಯ ಎಫ್‌ಎಸ್‌ಎಲ್ ಲ್ಯಾಬ್‌ಗೆ ಕಳುಹಿಸಿ ವರದಿ ಪಡೆಯಲು ದಿನಗಳು, ಕೆಲವೊಮ್ಮೆ ತಿಂಗಳುಗಳೇ ಬೇಕಾಗುತ್ತಿತ್ತು. ಆದರೆ, ಈ ಸುಧಾರಿತ ಮೊಬೈಲ್ ಲ್ಯಾಬ್‌ಗಳು ನೇರವಾಗಿ ಘಟನಾ ಸ್ಥಳಕ್ಕೇ ಧಾವಿಸಿ, ಅತ್ಯಾಧುನಿಕ ಉಪಕರಣಗಳ ಸಹಾಯದಿಂದ ಸ್ಥಳದಲ್ಲೇ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಿವೆ. ರಾಜ್ಯಾದ್ಯಂತ ಜಿಲ್ಲೆಗೊಂದು ಎಫ್ಎಸ್ಎಲ್ ವಾಹನ ರಾಜ್ಯ ಸರ್ಕಾರ ನೀಡಿದ್ದು, ಸದ್ಯ ಈ ವಾಹನ ಜಿಲ್ಲೆಯಲ್ಲಿ ನಡೆಯುವ ಆಪರಾದ ಪ್ರಕರಣಗಳಿಗೆ ಸಂಚಾರಿ ಲ್ಯಾಬ್ ಕಾರ್ಯನಿರ್ವಹಿಸಲಿದೆ ಎಂದರು.
ಈ ವಾಹನದ ಪ್ರಮುಖ ವೈಶಿಷ್ಟ್ಯಗಳೇನು?
ಅಪರಾಧ ಸ್ಥಳದಲ್ಲಿ ಸಿಗುವ ಮೊಬೈಲ್, ಲ್ಯಾಪ್‌ಟಾಪ್, ಹಾರ್ಡ್ಡಿಸ್ಕ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳಿಂದ ಅಳಿಸಿಹಾಕಲಾದ ಡೇಟಾವನ್ನು ಸ್ಥಳದಲ್ಲೇ ರಿಕವರಿ ಮಾಡುವ ತಂತ್ರಜ್ಞಾನ. ರಕ್ತದ ಕಲೆಗಳು, ಕೂದಲು ಅಥವಾ ದೇಹದ ಅಂಗಾAಶಗಳನ್ನು ಸ್ಥಳದಲ್ಲೇ ಗುರುತಿಸುವ ರಿಯಾಜೆಂಟ್ ಕಿಟ್‌ಗಳು. ಗುಂಡಿನ ದಾಳಿ ಅಥವಾ ಸ್ಫೋಟ ಸಂಭವಿಸಿದಾಗ, ಬಳಸಲಾದ ವೆಪನ್ ಅಥವಾ ಸ್ಫೋಟಕಗಳ ಮಾದರಿಯನ್ನು ಕ್ಷಣಾರ್ಧದಲ್ಲಿ ವಿಶ್ಲೇಷಿಸುವ ಸಾಮರ್ಥ್ಯ. ಅಪರಾಧ ಸ್ಥಳದಲ್ಲ ಸಿಗುವ ಬೆರಳಚ್ಚುಗಳನ್ನು ತಕ್ಷಣವೇ ಸ್ಕ್ಯಾನ್ ಮಾಡಿ, ಇಲಾಖೆಯ ಅಪರಾಧಿಗಳ ಡೇಟಾಬೇಸ್ ಜತೆ ತಾಳೆ ನೋಡುವ ವ್ಯವಸ್ಥೆ. ಘಟನಾ ಸ್ಥಳವನ್ನು ಸಂಪೂರ್ಣವಾಗಿ 3ಆ ಮ್ಯಾಪಿಂಗ್ ಮಾಡಲು ಮತ್ತು ವೀಡಿಯೊ ರೆಕಾರ್ಡಿಂಗ್ ಮಾಡಲು ಪ್ರತ್ಯೇಕ ಕ್ಯಾಮೆರಾ ವ್ಯವಸ್ಥೆ. ಮಳೆ, ಗಾಳಿ ಅಥವಾ ಸಾರ್ವಜನಿಕರ ಹಸ್ತಕ್ಷೇಪದಿಂದ ಅಪರಾಧ ಸ್ಥಳದಲ್ಲಾಗುವ ಸಾಕ್ಷ್ಯ ನಾಶವನ್ನು ಇದು ತಡೆಯುತ್ತದೆ. ಸ್ಥಳದಲ್ಲೇ ಸಿಗುವ ಪ್ರಾಥಮಿಕ ಸಾಕ್ಷ್ಯದ ಆಧಾರದ ಮೇಲೆ ಶಂಕಿತರನ್ನು ತಕ್ಷಣವೇ ಗುರುತಿಸಿ ಬಂಧಿಸಲು ಅನುಕೂಲ. ವೈಜ್ಞಾನಿಕವಾಗಿ ಸಂಗ್ರಹಿಸಿದ ಸಾಕ್ಷ್ಯಗಳು ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಲು ಕೋರ್ಟ್ನಲ್ಲಿ ಬಲವಾದ ಆಧಾರವಾಗಲಿವೆ.
ನಿರೀಕ್ಷೆಗಳೇನು?
ಆರಂಭಿಕ ಹಂತದಲ್ಲಿ ಪ್ರಮುಖ ಮಹಾನಗರಗಳು ಮತ್ತು ವಲಯ ಕೇಂದ್ರಗಳಿಗೆ ಈ ವಾಹನಗಳನ್ನು ನಿಯೋಜಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿಯೊಂದು ಜಿಲ್ಲೆಗೂ ಕನಿಷ್ಠ ಒಂದಾದರೂ ಸುಧಾರಿತ ಮೊಬೈಲ್ ಫೋರೆನ್ಸಿಕ್ ಲ್ಯಾಬ್ ಒದಗಿಸುವ ಯೋಜನೆಯನ್ನು ಸರ್ಕಾರ ಹೊಂದಿದೆ. ಅಪರಾಧಿಗಳು ತಂತ್ರಜ್ಞಾನ ಬಳಸಿ ಹೈಟೆಕ್ ಆಗುತ್ತಿರುವಾಗ, ಅವರನ್ನು ಮೆಟ್ಟಿಲಷ್ಟೇ ಅಲ್ಲ, ಅವರಿಗಿಂತ ಒಂದು ಹೆಜ್ಜೆ ಮುಂದೆ ನಿಂತು ಹಿಡಿಯಲು ನಮ್ಮ ಕಾನೂನು ಜಾರಿ ಸಂಸ್ಥೆಗಳು ಸಜ್ಜಾಗುತ್ತಿರುವುದು ಸಾರ್ವಜನಿಕರಲ್ಲಿ ಸುರಕ್ಷತೆಯ ಭರವಸೆಯನ್ನು ಹೆಚ್ಚಿಸಿದೆ!
ಸಾಕ್ಷ್ಯಾಧಾರಗಳು ನಾಶವಾಗುವ ಮುನ್ನವೇ ಅವುಗಳನ್ನು ಅತ್ಯಂತ ನಿಖರವಾಗಿ ಸಂಗ್ರಹಿಸುವುದು ತನಿಖೆಯ ಯಶಸ್ಸಿಗೆ ಪ್ರಮುಖ ಕಾರಣ. ಈ ಸುಧಾರಿತ ಮೊಬೈಲ್ ಲ್ಯಾಬ್‌ಗಳು ಅಪರಾಧ ತನಿಖೆಯ ದಿಕ್ಕನ್ನೇ ಬದಲಾಯಿಸಲಿವೆ.
— ಎಸ್.ಜಾಹ್ನವಿ, ಎಸ್ಪಿ, ವಿಜಯನಗರ
ಸಾಕ್ಷ್ಯಾಧಾರಗಳು ನಾಶವಾಗುವ ಮುನ್ನವೇ ಅವುಗಳನ್ನು ಅತ್ಯಂತ ನಿಖರವಾಗಿ ಸಂಗ್ರಹಿಸುವುದು ತನಿಖೆಯ ಯಶಸ್ಸಿಗೆ ಪ್ರಮುಖ ಕಾರಣ. ಈ ಸುಧಾರಿತ ಮೊಬೈಲ್ ಲ್ಯಾಬ್‌ಗಳು ಅಪರಾಧ ತನಿಖೆಯ ದಿಕ್ಕನ್ನೇ ಬದಲಾಯಿಸಲಿವೆ.
— ಎಸ್.ಜಾಹ್ನವಿ, ಎಸ್ಪಿ, ವಿಜಯನಗರ