ಹೊಸಪೇಟೆ ರೈಲ್ವೆ ಸ್ಟೇಷನ್‌ನಲ್ಲಿ ಶುಕ್ರವಾರ ಶ್ವಾನದಳದಿಂದ ಪರಿಶೀಲನೆ ನಡೆಯಿತು.
- ಸ್ವಾತಂತ್ರ‍್ಯ ದಿನಾಚರಣೆ ನಿಮಿತ್ತ ಹಂಪಿ ಸೇರಿ ಇತರೆ ಕಡೆ ಶ್ವಾನದಳದಿಂದ ತೀವ್ರ ತಪಾಸಣೆ
ಹೊಸಪೇಟೆ: ಸ್ವಾತಂತ್ರ‍್ಯ ದಿನಾಚರಣೆಯ ನಿಮಿತ್ತ ವಿಜಯನಗರ ಜಿಲ್ಲೆಯ ಪ್ರಮುಖ ಪ್ರವಾಸಿ ಹಾಗೂ ಸಾರ್ವಜನಿಕ ತಾಣಗಳಲ್ಲಿ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸಿದೆ.
ಜಿಲ್ಲೆಯ ಐತಿಹಾಸಿಕ ತಾಣವಾದ ವಿಶ್ವವಿಖ್ಯಾತ ಹಂಪಿ, ಪ್ರಸಿದ್ಧ ತುಂಗಭದ್ರಾ ಜಲಾಶಯ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದAತೆ ಮುನ್ನೆಚ್ಚರಿಕಾ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದೊಂದಿಗೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವ್ಯಾಪಕ ಪರಿಶೀಲನೆ ನಡೆಸುತ್ತಿದ್ದಾರೆ.
ನಗರದ ರೈಲ್ವೆ ನಿಲ್ದಾಣದಲ್ಲಿ ಬಿಗಿ ತಪಾಸಣೆ ಕೈಗೊಳ್ಳಲಾಗಿದ್ದು, ರೈಲುಗಳ ಆಗಮನ-ನಿರ್ಗಮನದ ವೇಳೆ ಪ್ರಯಾಣಿಕರ ಲಗೇಜ್, ಬ್ಯಾಗ್‌ಗಳು, ಪಾರ್ಸೆಲ್ ಕಚೇರಿ ಹಾಗೂ ಪ್ಲಾಟ್‌ಫಾರ್ಮ್ಗಳನ್ನು ಶ್ವಾನದಳದ ನೆರವಿನಿಂದ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳು ಮತ್ತು ಬ್ಯಾಗ್‌ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಇನ್ನೊಂದೆಡೆ ಹಂಪಿಯ ಪ್ರಮುಖ ಸ್ಮಾರಕಗಳು ಮತ್ತು ತುಂಗಭದ್ರಾ ಜಲಾಶಯದ ಆವರಣದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳ ತಪಾಸಣೆ ಚುರುಕುಗೊಳಿಸಲಾಗಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು ಯಾವುದೇ ಸಂಶಯಾಸ್ಪದ ವ್ಯಕ್ತಿ ಅಥವಾ ವಸ್ತುಗಳು ಕಂಡುಬAದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.