ಹೂವಿನಹಡಗಲಿಯಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಅಕ್ಷತಾ ಟಿ. ಉದ್ಘಾಟಿಸಿದರು.  
ವಿಜಯನಗರ

ಇಚ್ಛೆಯಂತೆ ಜೀವಿಸಲು ಸಹಕಾರಿ

ಹೂವಿನಹಡಗಲಿ: ಸಂವಿಧಾನ ಜನರಿಗೆ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದ್ದು, ನಾವು ಎಲ್ಲರೂ ಹಕ್ಕುಗಳಿಗೆ ಜವಾಬ್ದಾರರಾಗಿದ್ದೇವೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಅಕ್ಷತಾ ಟಿ. ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ತಾಲೂಕು ಆಡಳಿತ, ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾನವಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು. ಮಾನವಹಕ್ಕುಗಳ ಮುಖ್ಯ ಉದ್ದೇಶ ಸ್ವಾತಂತ್ರ್ಯ, ನ್ಯಾಯ ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವುದಾಗಿದೆ. ಪ್ರತಿಯೊಬ್ಬರಿಗೂ ತನ್ನ ಇಚ್ಛೆಯಂತೆ ಜೀವಿಸಲು ಹಕ್ಕುಗಳು ಸಹಕಾರಿಯಾಗಿವೆ. ಆರೋಗ್ಯಪೂರ್ಣ ಪರಿಸರ ನಿರ್ಮಾಣವಾಗಲು ಮಾನವಹಕ್ಕುಗಳು ಅವಶ್ಯವಾಗಿವೆ. ವಿದ್ಯಾರ್ಥಿ ಜೀವನದಿಂದಲೇ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ದೇಶದಲ್ಲಿ ಬಡವ-ಬಲ್ಲಿದ ಎನ್ನದೆ ಎಲ್ಲರ ಹಕ್ಕುಗಳ ರಕ್ಷಣೆಯಾಗಬೇಕು. ಮೂಲಭೂತ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ನಾವೆಲ್ಲರೂ ನಮ್ಮ ಕರ್ತವ್ಯಗಳ ನಿರ್ವಹಣೆ ಹಾಗೂ ಮಾನವಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಮಾನವ ಹಕ್ಕುಗಳ ರಕ್ಷಣೆಗಾಗಿಯೇ ರಾಜ್ಯ ಹಾಗೂ ಕೇಂದ್ರ ಮಾನವ ಹಕ್ಕುಗಳ ಆಯೋಗ ಕೆಲಸ ಮಾಡುತ್ತಿವೆ. ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಕೂಡಲೇ ಆಯೋಗಕ್ಕೆ ದೂರು ನೀಡಬಹುದು ಎಂದರು.
ಸರ್ಕಾರಿ ಅಭಿಯೋಜಕ ಅಜ್ಜಯ್ಯ, ವಕೀಲ ಹನುಮಂತ, ವಕೀಲರ ಸಂಘದ ಉಪಾಧ್ಯಕ್ಷ ಶಿವಲಿಂಗಪ್ಪ ಸೂರಣಗಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನರೆಡ್ಡಿ, ಪ್ರಾಚಾರ್ಯ ಎಸ್.ಎಸ್.ಪಾಟೀಲ, ಐಕ್ಯೂಎಸಿ ಸಂಯೋಜಕಿ ಡಾ.ಮಹಿಮಾ ಜ್ಯೋತಿ, ರಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶರಣಪ್ಪ ಜಕ್ಕಲಿ ಇತರರಿದ್ದರು.