ಸಿರಿಗೇರಿ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟಕ್ಕಾಗಿ ರೈತರು ಜೋಳ ಸ್ವಚ್ಛಗೊಳಿಸುತ್ತಿರುವುದು.
- 8055 ಕ್ವಿಂಟಾಲ್ ಮಾರಾಟಕ್ಕಾಗಿ ನೋಂದನಿ
- ಸಿರಿಗೇರಿ ಬೆಂಬಲ ಬೆಲೆ ಜೋಳ ಖರೀದಿ
ಸಿರಿಗೇರಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ಗ್ರಾಮದ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹಿಂಗಾರು ಹಂಗಾಮಿನ ಜೋಳ ಖರೀದಿಗೆ ಇತ್ತೀಚೆಗೆ ಚಾಲನೆ ನೀಡಲಾಯಿತು.
ಕಳೆದ ತಿಂಗಳು ಮುಂಗಾರು ಹಂಗಾಮಿನ 4,353 ಕ್ವಿಂಟಾಲ್ ಜೋಳವನ್ನು ಮಾರಾಟ ಮಾಡಲು ರೈತರು ಮಾರ್ಚ್ 20ರೊಳಗೆ ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಬಹುತೇಕ ಬೆಳೆಗಾರರಿಗೆ ಹಣ ಪಾವತಿಯಾಗಿದ್ದು, ತಾಂತ್ರಿಕ ತೊಂದರೆ ಇರುವ ಕೆಲವು ರೈತರಿಗೆ ಹಣ ಪಾವತಿ ಬಾಕಿ ಇದೆ.
ಸದ್ಯ ಹಿಂಗಾರು ಹಂಗಾಮಿನ ಜೋಳ ಖರೀದಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಸಿರಿಗೇರಿ ಸೊಸೈಟಿಯಲ್ಲಿ 8055 ಕ್ವಿಂಟಾಲ್ ಜೋಳ ಮಾರಾಟ ಮಾಡಲು ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈವರೆಗೆ ನಾಲ್ಕು ಸಾವಿರ ಕ್ವಿಂಟಾಲ್‌ಗೂ ಅಧಿಕ ಜೋಳ ಖರೀದಿಸಲಾಗಿದ್ದು, ಖರೀದಿ ಪ್ರಕ್ರಿಯೆ ಮುಂದುವರಿದಿದೆ. ಮುಂಗಾರು ಹಂಗಾಮಿನ ಬಾಕಿ ಹಣ ಪಾವತಿ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.