ಹನುಮಂತಪ್ಪ 
ವಿಜಯನಗರ

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಶಿಕ್ಷಕನಿಗೆ ಧರ್ಮದೇಟು

ಪ್ರಮುಖ ಮುಖ್ಯಾಂಶಗಳು

  • ಪೋಕ್ಸೋ ಪ್ರಕರಣ ದಾಖಲು
ಹೂವಿನಹಡಗಲಿ: ತಾಲೂಕಿನ ಮಹಾಜನದಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ, ಗಣಿತ ಶಿಕ್ಷಕ ಹನುಮಂತಪ್ಪಗೆ (54) ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.
ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಗೆ ಸಮವಸ್ತ್ರ ನೀಡುವ ನೆಪದಲ್ಲಿ ಕೋಣೆಗೆ ಕರೆದೊಯ್ದ ಶಿಕ್ಷಕ, ಅನುಚಿತವಾಗಿ ನಡೆದುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದರಿಂದ ಭಯಭೀತಳಾದ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ತಕ್ಷಣವೇ ಆಕ್ರೋಶಿತ ಪೋಷಕರು ಹಾಗೂ ಗ್ರಾಮಸ್ಥರು ಶಾಲೆಯ ಬಳಿ ಜಮಾಯಿಸಿ ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಇಟ್ಟಿಗಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ, ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದಿದ್ದಾರೆ. ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮೂಲತಃ ಬಳ್ಳಾರಿ ತಾಲೂಕಿನ ಸಂಜೀವರಾಯಕೋಟೆಯವನಾದ ಹನುಮಂತಪ್ಪ, ಹಿಂದೆ ಅಲ್ಲಿ ಕೆಲಸ ಮಾಡುವಾಗಲೂ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸಿದ್ದ ಎನ್ನಲಾಗಿದೆ. ಈ ಘಟನೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಯನ್ನು ಮತ್ತೊಮ್ಮೆ ಪ್ರಶ್ನಿಸುವಂತೆ ಮಾಡಿದ್ದು, ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.