ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥ ಬಿದಿಯಲ್ಲಿ ಸಂಸದ ಈ.ತುಕಾರಾಂ ಪರಿಶೀಲನೆ ನಡೆಸಿದರು. ಹವಾಮ ಆಯುಕ್ತ ರಮೇಶ್ ವಟಗಲ್, ರಾಜ್ಯ ಪುರಾತತ್ತ್ವ ನಿರ್ದೇಶಕ ಶೇಜೆಶ್ವರ, ಹಂಪಿ ಗ್ರಾಪಂ ಮಾಜಿ ಅಧ್ಯಕ್ಷೆ ರಜನಿ, ಮಾಜಿ ಸದಸ್ಯ ಗೋಪಾಲ್ ಇತರರಿದ್ದರು. 
ವಿಜಯನಗರ

ಹಂಪಿ, ಕನ್ನಡ ವಿವಿಗೆ ಕಾಯಕಲ್ಪ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಸಂಸದ ಈ. ತುಕಾರಾಮ್ ಭರವಸೆ
ಹೊಸಪೇಟೆ: ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯ ಸ್ಮಾರಕಗಳ ರಕ್ಷಣೆ, ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಕನ್ನಡ ವಿವಿಯ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಈ.ತುಕಾರಾಂ ಭರವಸೆ ನೀಡಿದರು.
ಹಂಪಿಯ ವಿವಿಧ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಅವರು ಸುದೀರ್ಘ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಮಾತನಾಡಿದರು. ಕಮಲಾಪುರ ಪುರಾತತ್ವ ವಸ್ತುಸಂಗ್ರಹಾಲಯ, ಮಹಾನವಮಿ ದಿಬ್ಬ, ಹಜಾರರಾಮ ಹಾಗೂ ವಿರೂಪಾಕ್ಷ ದೇವಾಲಯಗಳಿಗೆ ಭೇಟಿ ನೀಡಿದ ಅವರು, ಪ್ರವಾಸಿಗರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ವಸ್ತುಸಂಗ್ರಹಾಲಯದಲ್ಲಿರುವ ಹಂಪಿಯ ಇತಿಹಾಸ ಸಾರುವ ಇಂಗ್ಲಿಷ್ ವಿಡಿಯೋವನ್ನು ಕನ್ನಡದಲ್ಲೂ ಲಭ್ಯವಾಗುವಂತೆ ಮಾಡಬೇಕು. ಪ್ರವಾಸಿಗರ ದಟ್ಟಣೆ ನಿರ್ವಹಿಸಲು ಹೊಸದಾಗಿ 3 ಓಪನ್ ಅಂಬಾರಿ ಬಸ್‌ಗಳನ್ನು ಒದಗಿಸುವುದಾಗಿ ಘೋಷಿಸಿದರು. ಮಹಾನವಮಿ ದಿಬ್ಬ ಹಾಗೂ ವಿರೂಪಾಕ್ಷ ದೇಗುಲ ಆವರಣದಲ್ಲಿರುವ ಕುಡಿವ ನೀರು, ಶೌಚಗೃಹ ಹಾಗೂ ಚರಂಡಿ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಹಂಪಿಯ ಕನ್ನಡ ವಿವಿಗೆ ಭೇಟಿ ನೀಡಿದ ಅವರು, ಕುಲಪತಿಗಳು ಹಾಗೂ ಕುಲಸಚಿವರೊಂದಿಗೆ ಚರ್ಚೆ ನಡೆಸಿದರು. ವಿವಿ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು ಹಾಗೂ ಬೋಧಕ ಸಿಬ್ಬಂದಿಯ ಕೊರತೆಯ ಬಗ್ಗೆ ಮಾಹಿತಿ ಪಡೆದ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು. ಕನ್ನಡ ವಿವಿ ನಾಡಿನ ಹೆಮ್ಮೆಯ ಸಂಸ್ಥೆಯಾಗಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಬೋಧಕರ ನೇಮಕಾತಿಗೆ ಮೊದಲ ಆದ್ಯತೆ ನೀಡಲಾಗುವುದು. ವಿವಿಗೆ ಅಗತ್ಯವಿರುವ ವಿಶೇಷ ಅನುದಾನ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊAದಿಗೆ ಖುದ್ದಾಗಿ ಚರ್ಚಿಸಿ ಶೀಘ್ರವೇ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.