ಹಂಪಿ ವಿರೂಪಾಕ್ಷೇಶ್ವರ ದೇಗುಲದ ರಥ ಬಿದಿ ಪ್ರವಾಸಿಗರು ಇಲ್ಲದೇ ಬಿಕೋ ಎನ್ನುತ್ತಿರುವುದು. 
ವಿಜಯನಗರ

ಹಂಪಿಗೆ ಮಧ್ಯಪ್ರಾಚ್ಯ ಯುದ್ಧದಬಿಸಿ

ಪ್ರಮುಖ ಮುಖ್ಯಾಂಶಗಳು

  • ಪ್ರವಾಸೋದ್ಯಮದ ಮೇಲೆ ಕರಿನೆರಳು
  • ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಮಧ್ಯಪ್ರಾಚ್ಯ ಯುದ್ಧದ బిసి ಹಂಪಿ ಸೇರಿದಂತೆ ರಾಜ್ಯದ ಪ್ರವಾಸೋದ್ಯಮಕ್ಕೂ ತಟ್ಟಿದ್ದು, ಅರಬ್ ದೇಶಗಳ ಪ್ರವಾಸಿಗರು ಮಾತ್ರ ವಲ್ಲದೆ, ದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.
ಹಂಪಿ ಸೇರಿದಂತೆ ರಾಜ್ಯದ ಪ್ರವಾಸಿ ಕೇಂದ್ರಗಳಲ್ಲಿ ಈ ಅವಧಿಯಲ್ಲಿ ವಿದೇಶಿ ಪ್ರವಾಸಿಗರ ಸಂಚಾರ ಹೆಚ್ಚಿರುತ್ತದೆ. ಅದರಲ್ಲೂ ಅರಬ್ ದೇಶಗಳ ಪ್ರವಾಸಿಗರು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ವಿದೇಶಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಆತಂಕದ ನಡುವೆ, ವಾಣಿಜ್ಯ ಅನಿಲ ಸಿಲಿಂಡರ್‌ಗಳ ಕೊರತೆ ತೀವ್ರವಾಗಿದೆ. ಹೀಗಾಗಿ ಪ್ರವಾಸಿ ಕೇಂದ್ರಗಳ ರೆಸಾರ್ಟ್ಗಳು, ಹೋಟೆಲ್ಗಳು ಹಾಗೂ ಸಾಮಾನ್ಯ ಗ್ರಾಹಕರು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಸೋದ್ಯಮದ ಮೇಲೆ ಯುದ್ಧದ ಕರಿನೆರಳು ಬಿದ್ದಿರುವುದರಿಂದ ವಿದೇಶಿ ಪ್ರವಾಸಿಗರಷ್ಟೇ ಅಲ್ಲದೆ, ದೇಶಿ ಪ್ರವಾಸಿಗರ ಸಂಖ್ಯೆಯೂ ಕುಸಿದಿದೆ.
ಹೋಟೆಲ್ ಉದ್ಯಮ ತತ್ತರ
ವಾಣಿಜ್ಯ ಗ್ಯಾಸ್ ಸಿಲಿಂಡರ್ ಲಭ್ಯವಾಗದ ಹಿನ್ನೆಲೆಯಲ್ಲಿ ಅನೇಕ ಉದ್ಯಮಗಳು ದೈನಂದಿನ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ರೆಸಾರ್ಟ್‌ಗಳಲ್ಲಿ ಆಹಾರ ಸೇವೆ, ಹೋಟೆಲ್‌ಗಳಲ್ಲಿ ಅಡುಗೆ ಕಾರ್ಯ ಹಾಗೂ ಗೃಹ ಬಳಕೆಯ ಸಿಲಿಂಡರ್ ಬುಕ್ಕಿಂಗ್ ವಿಚಾರದಲ್ಲಿ ಹೋಟೆಲ್ ಉದ್ಯಮ ತತ್ತರಿಸಿದೆ. ಈ ಬಾರಿ ಬಿಸಿಲಿನ ಬೇಗೆಯ ಜತೆಗೆ ವಾಣಿಜ್ಯ ಅನಿಲ ಸಿಲಿಂಡರ್ ಕೊರತೆ ಹಂಪಿ ಮಾತ್ರವಲ್ಲದೆ ಇಡೀ ರಾಜ್ಯದ ಪ್ರವಾಸೋದ್ಯಮ ವಲಯದಲ್ಲಿ ಕಂಪನ ಸೃಷ್ಟಿಸಿದೆ. ನಿಯಮದಂತೆ ಗೃಹ ಬಳಕೆಯ ಅನಿಲವನ್ನು ಮನೆಗಳಲ್ಲಿ ಮಾತ್ರ ಬಳಸಬೇಕು. ಆದರೆ, ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು ದೊರೆಯದ ಕಾರಣ ಹಲವು ಹೋಟೆಲ್ ಹಾಗೂ ರೆಸಾರ್ಟ್‌ಗಳು ಸಮಸ್ಯೆ ಎದುರಿಸುತ್ತಿವೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಪ್ರವಾಸಿಗರಿಂದ ತುಂಬಿರುತ್ತಿದ್ದ ಪ್ರದೇಶಗಳಲ್ಲಿ ಈಗ ಸಿಲಿಂಡ‌ರ್ ಕೊರತೆಯಿಂದ ಆಹಾರ ತಯಾರಿಕೆಗೆ ತೊಂದರೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ರೆಸಾರ್ಟ್ ಮಾಲೀಕರು ಬುಕ್ಕಿಂಗ್ ಪ್ರಮಾಣವನ್ನು ಶೇ. 50 ಕಡಿತಗೊಳಿಸಿದ್ದಾರೆ ಎನ್ನಲಾಗಿದೆ.

ಸಾಮಾನ್ಯರ ಜನಜೀವನದ ಮೇಲೂ ಪರಿಣಾಮ

ಪ್ರವಾಸಿಗರನ್ನೇ ಆಶ್ರಯಿಸಿದ್ದ ಹಲವು ಹೋಟೆಲ್‌ಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ಕಳೆದ ಕೆಲವು ದಿನಗಳಿಂದ ಮುಚ್ಚಿವೆ. ಕಾರ್ಯಾಚರಣೆ ಸ್ಥಗಿತಗೊಂಡ ಪರಿಣಾಮ ಹತ್ತಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವಂತಾಗಿದೆ. ವಾರಾಂತ್ಯದಲ್ಲಿ ಪ್ರವಾಸಿಗರು ಹಾಗೂ ಪ್ರಯಾಣಿಕರ ಓಡಾಟ ಹೆಚ್ಚಿರುವ ಪ್ರದೇಶಗಳಲ್ಲಿ ಹೋಟೆಲ್ಗಳು ಬಂದ್ ಆಗಿರುವುದು ಸ್ಥಳೀಯ ವ್ಯಾಪಾರ ಚಟುವಟಿಕೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಸಿಲಿಂಡರ್ ಕೊರತೆಯ ಸಮಸ್ಯೆ ಕೇವಲ ಒಂದು ವಲಯಕ್ಕೆ ಸೀಮಿತವಾಗದೆ ವ್ಯಾಪಾರ, ಪ್ರವಾಸೋದ್ಯಮ, ಕಾರ್ಮಿಕ ವರ್ಗ ಮತ್ತು ಸಾಮಾನ್ಯ ಜನಜೀವನದ ಮೇಲೆ ಪ್ರಭಾವ ಬೀರಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸಿಲಿಂಡರ್ ಪೂರೈಕೆ ಸುಗಮಗೊಳಿಸದಿದ್ದರೆ, ಮುಂದಿನ ದಿನಗಳಲ್ಲಿ ಸಣ್ಣ ವ್ಯಾಪಾರಿಗಳು ಹಾಗೂ ಹೋಟೆಲ್ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಆತಂಕ ವ್ಯಕ್ತವಾಗಿದೆ.

ಹೀಗಿದೆ ಪರಿಸ್ಥಿತಿ

2024ರ ಮಾರ್ಚ್‌ನಲ್ಲಿ 20 ಸಾವಿರ ವಿದೇಶಿ ಪ್ರವಾಸಿಗರು, ಎರಡು ಲಕ್ಷ ದೇಶಿ ಪ್ರವಾಸಿಗರು ಹಂಪಿ ಪರಿಸರಕ್ಕೆ ಭೇಟಿ ನೀಡಿದರು. ಕಳೆದ ವರ್ಷ 23 ಸಾವಿರ ವಿದೇಶಿಗರು ಭೇಟಿ ನೀಡಿದರೆ, 3.10 ಲಕ್ಷ ದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ, ಈ ಬಾರಿ ಮಾರ್ಚ್ ಆರಂಭದಿಂದ ಇಲ್ಲಿಯವರೆಗೆ 85 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 50 ಸಾವಿರ ದೇಶಿ ಪ್ರವಾಸಿಗರು ಇಲ್ಲಿ ಬಂದು ಹೋಗಿದ್ದಾರೆ. ಹೊಸಪೇಟೆ, ಹಂಪಿ, ಆನೆಗೊಂದಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಬೀದಿಬದಿ ಹೊಟೇಲ್ಗಳು ಹೊರತುಪಡಿಸಿ 350ಕ್ಕೂ ಅಧಿಕ ಹೊಟೇಲ್, ರೆಸಾರ್ಟ್ಗಳಿವೆ. ಈ ತಿಂಗಳು ವಾಣಿಜ್ಯ ಅನಿಲ ಸಿಲಿಂಡರ್ ಕೊರತೆ ತೀವ್ರವಾಗಿದೆ. ಹೊಟೇಲ್‌ಗಳಲ್ಲಿ ಅಡುಗೆ ಕೊರತೆಯಿಂದ ವಸತಿಗಳಿಗೆ ಮಾತ್ರ ಸೀಮಿತವಾಗಿವೆ. ಇದರಿಂದ ಪ್ರವಾಸೋದ್ಯಮದ ಮೇಲೆ ಕರಿ ನೆರಳು ಬಿದ್ದಿದೆ.

ಬಂದವರಿಗೆ ಬೆಲೆ ಏರಿಕೆ ಶಾಕ್

ಅತಿಥಿಗಳಿಗೆ ಸಮರ್ಪಕ ಆಹಾರ ವ್ಯವಸ್ಥೆ ಕಲ್ಪಿಸುವುದು ಸವಾಲಾಗಿರುವುದರಿಂದ ಮೆನುವಿನಲ್ಲೂ ಬದಲಾವಣೆ ಮಾಡಲಾಗಿದೆ. ತುರ್ತು ಪರಿಸ್ಥಿತಿ ನಿಭಾಯಿಸಲು ಕೆಲವರು ಸೌದೆ ಒಲೆ ಬಳಸಿ ಅಡುಗೆ ಮಾಡಲು ಮುಂದಾಗಿದ್ದಾರೆ. ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ವಿರಳವಾಗಿದ್ದರೂ, ಇರುವ ಪ್ರವಾಸಿಗರಿಗೆ ಊಟ-ಉಪಹಾರದ ಬೆಲೆ ಏರಿಕೆ ಬಿಸಿ ತಟ್ಟಿದೆ. ಈ ಹಿಂದೆ 20 ರಿಂದ 50 ರೂ. ಆಸುಪಾಸಿನಲ್ಲಿದ್ದ ಉಪಹಾರದ ದರವು ಈಗ 50 ರಿಂದ 100 ರೂ. ಮೇಲ್ಪಟ್ಟಿದೆ. ಪ್ರವಾಸೋದ್ಯಮವನ್ನೇ ಪ್ರಮುಖವಾಗಿ ನಂಬಿಕೊಂಡಿರುವ ಈ ಭಾಗದ ಹೋಟೆಲ್ ಮತ್ತು ರೆಸಾರ್ಟ್ಗಳ ಆದಾಯಕ್ಕೆ ಇದು ದೊಡ್ಡ ಹೊಡೆತ ನೀಡಿದೆ. ವಾರಾಂತ್ಯದ ಬುಕ್ಕಿಂಗ್‌ಗಳ ಮೇಲೆ ಅವಲಂಬಿತವಾಗಿರುವ ಅನೇಕ ರೆಸಾರ್ಟ್‌ಗಳು ಈಗ ಸೀಮಿತ ಸೇವೆಯೊಂದಿಗೆ ಕಾರ್ಯನಿರ್ವಹಿಸುತ್ತಿವೆ.
"

ವಾಣಿಜ್ಯ ಗ್ಯಾಸ್ ಸಿಲಿಂಡ‌ರ್ ಸಮಸ್ಯೆಯಿಂದ ಪ್ರವಾಸೋದ್ಯಮಕ್ಕೆ ಬಿಸಿ ತಟ್ಟಿದೆ. ಹಂಪಿ ಪರಿಸರದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಹೋಟೆಲ್ ಉದ್ಯಮಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಪ್ರವಾಸಿಗರನ್ನು ಸೆಳೆಯುವಂತೆ ಕ್ರಮಕೈಗೊಳ್ಳಬೇಕು. ಬೆಲೆ ಏರಿಕೆ ಮಾಡದಂತೆ ಸೂಚನೆ ನೀಡಲಾಗಿದೆ.

"

ಹೋಟೆಲ್‌ಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಕೆಲ ಹೋಟೆಲ್ ಗಳು ಕೇವಲ ವಸತಿ ಮಾತ್ರ ಕೊಡುತ್ತಿವೆ. ಪ್ರವಾಸಿಗರು ಇಲ್ಲದೆ ನಾವು ಬರಿಗೈಯಲ್ಲಿ ಮನೆಗೆ ಹೋಗುವಂತಾಗಿದೆ.