ಪ್ರಮುಖ ಮುಖ್ಯಾಂಶಗಳು
ಹರಪನಹಳ್ಳಿ: ನಾನು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವನಾಗಲಿ ಅಥವಾ ಬಿಡಲಿ, ನವೆಂಬರ್‌ನಲ್ಲೇ ಹಂಪಿ ಉತ್ಸವ ಆಯೋಜಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಉತ್ಸವದಲ್ಲಿ ಘೋಷಿಸಿದಂತೆ ಈ ಬಾರಿಯೂ ನಿಗದಿತ ಸಮಯಕ್ಕೇ ಉತ್ಸವ ನಡೆಯಲಿದೆಎಂದು ವಸತಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ನಿಲುವಂಜಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ, ಮಳೆ ಅಭಾವದಿಂದ ಹಾನಿಗೊಳಗಾದ ಬೆಳೆಗಳನ್ನು ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಸಕ್ತ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಸಾವಿರಾರು ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಈ ಕುರಿತು ತಕ್ಷಣವೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ ಹಾಗೂ ಸಲ್ಲಿಸದಿರುವ ಎಲ್ಲ ರೈತರಿಗೂ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸಚಿವ ಆರ್.ಬಿ. ತಿಮ್ಮಾಪುರ ಅವರ ಆಡಿಯೊ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪೇಮೆಂಟ್ ಸಿಸ್ಟಮ್ ಕಾಂಗ್ರೆಸ್ ಸಂಸ್ಕೃತಿಯಲ್ಲ, ಅದು ಬಿಜೆಪಿಯಲ್ಲಿದೆ. ಹಿಂದೆ ನನ್ನ ವಿರುದ್ಧವೂ ಪಿತೂರಿ ನಡೆಸಿದ್ದರು. ಪಿತೂರಿ ಮಾಡಿದವರು ಯಾರು ಎಂಬುದು ನನಗೆ ಮುಖ್ಯವಲ್ಲ. ಇಂತಹ ರಾಜಕೀಯ ತಂತ್ರಗಳು ಎಲ್ಲ ಪಕ್ಷಗಳಲ್ಲೂ ಇವೆ. ನಮ್ಮ ವಿರುದ್ಧ ಪಿತೂರಿ ಮಾಡಿದವರಿಗೂ ಭಗವಂತ ಒಳ್ಳೆಯದು ಮಾಡಲಿ ಎಂದರು.
ಸಿದ್ದರಾಮಯ್ಯ ಜತೆ ಉತ್ತಮ ಬಾಂಧವ್ಯ
ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ. ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ಅವರ ಆಶೀರ್ವಾದ ಪಡೆದಿದ್ದೇನೆ. ಮೈಸೂರು ಜಿಲ್ಲೆಯ ದೃಷ್ಟಿಯಿಂದ ಮಾತ್ರ ಸಿದ್ದರಾಮಯ್ಯ ಅವರು ನನ್ನ ಹೆಸರು ಪ್ರಸ್ತಾಪಿಸಿಲ್ಲ ಎಂದು ಯತೀಂದ್ರ ಹೇಳಿಕೆ ನೀಡಿದ್ದಾರಷ್ಟೇ. ಸಚಿವ ಸ್ಥಾನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿಲ್ಲ; 'ಅಹಿಂದ' ನಾಯಕರನ್ನು ಪರಿಗಣಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಾಮಾನ್ಯ ಪೌರಕಾರ್ಮಿಕರ ಮಗನಾದ ಬಸವಂತಪ್ಪ ಅವರನ್ನು ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ ಮಾತ್ರ. ಎಂಎಲ್ಸಿ ಆಗಿರುವ ಓರ್ವ ಮಹಿಳೆಗೆ ಸಚಿವ ಸ್ಥಾನ ಸಿಗಬೇಕಿತ್ತು, ಆದರೆ ಕಾರಣಾಂತರಗಳಿಂದ ಅದು ತಾತ್ಕಾಲಿಕವಾಗಿ ವಿಳಂಬವಾಗಿದೆ. ಇನ್ನೆರಡು ದಿನಗಳಲ್ಲಿ ಹೈಕಮಾಂಡ್ ಈ ಗೊಂದಲವನ್ನು ಸರಿಪಡಿಸಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆ ವಸತಿ ಸಚಿವನಾಗಿದ್ದಾಗ 79 ಸಾವಿರ ಮನೆಗಳನ್ನು ಮಂಜೂರು ಮಾಡಿದ್ದೆ. ಪ್ರಸ್ತುತ 39 ಸಾವಿರ ಮನೆಗಳ ನಿರ್ಮಾಣ ಬಾಕಿ ಉಳಿದಿರುವುದರಿಂದ, ನನಗೇ ವಸತಿ ಖಾತೆಯನ್ನು ಮರುಹಂಚಿಕೆ ಮಾಡುವಂತೆ ಮನವಿ ಮಾಡಿದ್ದೇನೆ. ಆದಾಗ್ಯೂ, ಮುಖ್ಯಮಂತ್ರಿಗಳು ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಇತರರಿದ್ದರು