ಹೊಸಪೇಟೆಯಲ್ಲಿ ಇತ್ತೀಚೆಗೆ ಗಂಗಾ ಪರಮೇಶ್ವರಿ ದೇವಿಯ ಜಯಂತಿ ನಿಮಿತ್ತ ಮೆರವಣಿಗೆ ನಡೆಯಿತು.
ಹೊಸಪೇಟೆ: ಗಂಗಾ ಪರಮೇಶ್ವರಿ ದೇವಿಯ ಜಯಂತಿ ನಿಮಿತ್ತ ನಗರದಲ್ಲಿ ಇತ್ತೀಚೆಗೆ ಭಕ್ತಿಯ ಶ್ರದ್ಧೆಯಿಂದ ಬೃಹತ್ ಮೆರವಣಿಗೆ ನಡೆಯಿತು.
ಗಂಗಾ ಮತ ಸಮಾಜದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಮಾಜದ ನೂರಾರು ಮಹಿಳೆಯರು, ಯುವಕರು, ಹಿರಿಯರು ಹಾಗೂ ಗಣ್ಯರು ಉತ್ಸಾಹದಿಂದ ಭಾಗವಹಿಸಿ ಧಾರ್ಮಿಕ ಆಚರಣೆಗೆ ಮೆರುಗು ತಂದರು.
ನಗರದ ಸಂಕ್ಕಿ ವೀರಭದ್ರ ದೇಗುಲದಿಂದ ಗಂಗಾ ಪರಮೇಶ್ವರಿಯ ಭಾವಚಿತ್ರದೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ನೂರಾರು ಮಹಿಳೆಯರು ತಲೆಯ ಮೇಲೆ ಪೂರ್ಣಕುಂಭ ಹೊತ್ತು ಸಾಂಪ್ರದಾಯಿಕ ಉಡುಗೆಯಲ್ಲಿ ಭಕ್ತಿಭಾವದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ವಾಲ್ಮೀಕಿ ವೃತ್ತ, ಚಿತ್ರಕೇರಿ , ಮೆನ್ ಬಜಾರ್, ಪಾದಗಟ್ಟಿ ಆಂಜನೇಯಸ್ವಾಮಿ ದೇಗುಲ, ದೊಡ್ಡ ಮಸೀದಿ ರಸ್ತೆ, ಮಾರ್ಕೆಟ್ ಹಾಗೂ ಮದಕರಿ ನಾಯಕ ವೃತ್ತದ ಮೂಲಕ ಸಾಗಿಬಂದು ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು.
ಮೆರವಣಿಗೆ ಯುದ್ದಕ್ಕೂ ಭಕ್ತರು ಭಜನೆ, ಜಯಘೋಷ ಹಾಗೂ ಧಾರ್ಮಿಕ ಘೋಷಣೆಗಳ ಮೂಲಕ ಭಕ್ತಿಭಾವ ಮೆರೆದರು. ತಾಷಾ, ಡೊಳ್ಳು ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳ ಮೂಲಕ ನಗರದಾದ್ಯಂತ ಮೊಳಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ಉತ್ಸವದ ಸಂಭ್ರಮವನ್ನು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಗಂಗಾ ಮತ ಸಮಾಜದಿಂದ ಒಂದು ಜೋಡಿಗೆ ಉಚಿತವಾಗಿ ವಿವಾಹ ನೆರವೇರಿಸಲಾಯಿತು.