ಕಂಪ್ಲಿಯ ಶಾಸಕರ ಕಚೇರಿಯಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಕೆ.ಎಚ್.ಲಕ್ಷ್ಮಣ ಫಲಾನುಭವಿಗಳಿಗೆ ಪಂಪ್, ಮೋಟಾರ್ ಪೂರಕ ಸಾಮಗ್ರಿ ವಿತರಿಸಿದರು. ಫಲಾನುಭವಿಗಳಾದ ಹರಿಜನ ಮಾರೆಪ್ಪ, ದುರುಗಮ್ಮ, ಸಿ.ಹನುಮಂತಪ್ಪ, ಸಿ.ಕಟ್ಟೆಪ್ಪ ಇತರರಿದ್ದರು.
ಕಂಪ್ಲಿ : ಗಂಗಾ ಕಲ್ಯಾಣ ಯೋಜನೆ ರೈತರಿಗೆ ವರದಾನವಾಗಿದ್ದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಕೆ.ಎಚ್.ಲಕ್ಷ್ಮಣ ಹೇಳಿದರು.
ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಆದಿ ಜಾಂಬವ ಅಭಿವೃದ್ಧಿ ನಿಗಮದಡಿ 2021-22 ಮತ್ತು 22-23ನೇ ಸಾಲಿನ ಫಲಾನುಭವಿಗಳಿಗೆ ವೈಯಕ್ತಿಕ ಕೊಳವೆ ಬಾವಿಗಳಿಗೆ ಪಂಪು, ಮೋಟಾರ್, ಪೂರಕ ಸಾಮಗ್ರಿಗಳನ್ನು ಬುಧವಾರ ವಿತರಿಸಿ ಮಾತನಾಡಿದರು.
ರೈತರ ಕೃಷಿ ಅಭಿವೃದ್ಧಿಗೆ ಗಂಗಾ ಕಲ್ಯಾಣ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಶಾಸಕರು ಸೂಚಿಸಿದ್ದಾರೆ. ಯೋಜನೆ ಬಳಸಿಕೊಳ್ಳುವ ಮೂಲಕ ಭೂಮಿಗೆ ನೀರಾವರಿ ಸೌಲಭ್ಯ ಪಡೆದುಕೊಂಡು ಲಾಭದಾಯಕ ಕೃಷಿಯನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ರೈತರು ಮುಂದಾಗಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ 3 ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮದಡಿ 12 ಸೇರಿ ಒಟ್ಟು 15ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ಒದಗಿಸಲಾಗಿದೆ ಎಂದರು.