ಹಗರಿಬೊಮ್ಮನಹಳ್ಳಿ ತಾಪಂ ಸಭಾಂಗಣದಲ್ಲಿ ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಹಗರಿಬೊಮ್ಮನಹಳ್ಳಿ: ತಾಲೂಕಿನ ನಾಲ್ಕು ಹಾಸ್ಟೆಲ್‌ಗಳು ಶಿಥಿಲಗೊಂಡಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬುಧವಾರ ಮಾತನಾಡಿದರು. ಮೋರಗೆರೆ, ತಂಬ್ರಹಳ್ಳಿ ಮತ್ತು ಪಟ್ಟಣದ ಮೆಟ್ರಿಕ್‌ಪೂರ್ವ ಬಾಲಕರ ಹಾಸ್ಟೆಲ್ ಶಿಥಿಲಗೊಂಡಿದ್ದು, ಪಟ್ಟಣದ ಒಂದು ಹಾಸ್ಟೆಲ್ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಬಾಲಕಿಯರ ಮೆಟ್ರಿಕ್‌ಪೂರ್ವ ಹಾಸ್ಟೆಲ್ ಕೂಡ ಶಿಥಿಲಗೊಂಡಿದ್ದು, ನೆಲಸಮ ಮಾಡಿ ಹೊಸ ಕಟ್ಟಡಕ್ಕೆ ಪರವಾನಗಿ ನೀಡಬೇಕು ಎಂದು ಜಿಪಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಅವರು ವಿಜಯವಾಣಿಯಲ್ಲಿ ಮಂಗಳವಾರ ಪ್ರಕಟವಾದ ‘ಹಾಸ್ಟೆಲ್ ಶಿಥಿಲ ವಿದ್ಯಾರ್ಥಿನಿಯರು ತಳಮಳ’ ವರದಿ ಪ್ರಸ್ತಾಪಿಸಿ ಮಾಹಿತಿ ಕೋರಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿಥಿಲ ಕಟ್ಟಡಗಳ ಕುರಿತು ತಿಳಿಸಿದರು.
ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥ ಮಾತನಾಡಿ, ಹಂಪಸಾಗರ ಗ್ರಾಪಂ ವ್ಯಾಪ್ತಿಯ ಏಣಿಗಿ-1 ಮತ್ತು ಏಣಿಗಿ ಬಸಾಪುರ ಗ್ರಾಮದಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆಯಾಗಿದ್ದರೂ, ಬೇರೆ ಉದ್ದೇಶಕ್ಕೆ ಬಳಸಿಕೊಂಡಿರುವ ಪಿಡಿಒಗಳ ವಿರುದ್ಧ ಕ್ರಮ ವಹಿಸುವಂತೆ ಜಿಪಂಗೆ ದೂರು ಸಲ್ಲಿಸಲಾಗಿದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೋರೇಗೌಡ ಮಾತನಾಡಿ, ತಾಲೂಕಿನಲ್ಲಿ 243 ಅಂಗನವಾಡಿ ಕೇಂದ್ರಗಳಿದ್ದು, 230 ಸ್ವಂತ ಕಟ್ಟಡದಲ್ಲಿವೆ ಎಂದರು. ಜಿಪಂ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಮಾತನಾಡಿ, ಈ ಹಿಂದೆ ಎರಡು ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದರೂ, ನಿರ್ಮಿಸಿಲ್ಲ ಎಂದು ಪಿಡಿಒಗಳಾದ ಲಕ್ಷ್ಮಣ ಮತ್ತು ಆರ್.ಶಾಂತನಗೌಡ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ಅರಣ್ಯ ಇಲಾಖೆಯ ಮಂಜುನಾಯ್ಕ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಬಸವರೆಡ್ಡಿ, ಲೆಕ್ಕಾಧಿಕಾರಿ ತಿಪ್ಪೇಸ್ವಾಮಿ, ಬಿಇಒ ಎಂ.ಎಸ್.ಪ್ರಭಾಕರ, ತಾಲೂಕು ವೈದ್ಯಾಧಿಕಾರಿ ಪ್ರವೀಣ್ ಕುಮಾರ್, ಪಶುಸಂಗೋಪನೆ ಇಲಾಖೆ ಡಾ.ಪಿ.ಸೂರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೊಟ್ರೇಶನಾಯ್ಕ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ರಾಜಕುಮಾರನಾಯ್ಕ, ನರೇಗಾ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ ಇದ್ದರು.