ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಜನಜಾಗೃತಿ ಜಾಥಾ ನಡೆಯಿತು.
ಹಗರಿಬೊಮ್ಮನಹಳ್ಳಿ: ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಜೀವಗಳನ್ನು ಉಳಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಡಿ.ಕೆ.ಮಧುಸೂದನ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಜನಜಾಗೃತಿ ಜಾಥಾದಲ್ಲಿ ಬುಧವಾರ ಮಾತನಾಡಿದರು. ಎದುರಿಗೆ ಬರುವ ವಾಹನಗಳನ್ನು ಗಮನದಲ್ಲಿಟ್ಟುಕೊಂಡು ವಾಹನಗಳನ್ನು ಚಲಾಯಿಸಬೇಕೆದು ಸಲಹೆ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ಕೊಟ್ರೇಶ್ ಶೆಟ್ಟರ್ ಮಾತನಾಡಿ, ಸಂಚಾರ ನಿಯಮಗಳನ್ನು ಪಾಲನೆ ಮಾಡದೆ ಇರುವುದು ಸರಿಯಲ್ಲ. ಕಾರಿನಲ್ಲಿ ಹೋಗುವಾಗ ಸೀಟ್‌ಬೆಲ್ಟ್ ಹಾಕಬೇಕು. ಪಾದಚಾರಿಗಳು ರಸ್ತೆ ನಿಯಮ ಪಾಲಿಸಬೇಕು ಎಂದು ತಿಳಿಸಿದರು. ನ್ಯಾಯಾಲಯ ಆವರಣದಿಂದ ಬಸವೇಶ್ವರ ಪುತ್ಥಳಿವರೆಗೆ ಜಾಥಾ ನಡೆಯಿತು.
ಸಮಿತಿ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಸೈಯದ್ ಮೋಹಿದ್ದೀನ್, ಸಿಪಿಐ ವಿಕಾಸ್ ಲಂಬಾಣಿ, ತಾಪಂ ಇಒ ಪಿ.ವಿಶ್ವನಾಥ, ಪ್ರಾದೇಶಿಕ ಸಾರಿಗೆ ಇನ್‌ಸ್ಪೆಕ್ಟರ್ ಜಿ.ನಾಗರಾಜ, ಪ್ರಭಾರ ಬಿಇಒ ಪ್ರಭಾಕರ, ಸಿಡಿಪಿಒ ಬೋರೇಗೌಡ, ತಾಲೂಕು ವೈದ್ಯಾಧಿಕಾರಿ ಎಚ್.ಎಂ.ಪ್ರವೀಣ್ ಕುಮಾರ್, ಕಾರ್ಮಿಕ ಅಧಿಕಾರಿ ಪಾಂಡುರಂಗ, ಪಿಎಸ್‌ಐ ಬಸವರಾಜ್ ಅಡಿವಿಬಾವಿ, ಪುರಸಭೆ ಆರೋಗ್ಯ ಪರಿವೀಕ್ಷಣಾಧಿಕಾರಿ ಜಯಲಕ್ಷ್ಮೀ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಆಂಜನೇಯ, ಕಾರ್ಯದರ್ಶಿ ಡಿ.ಮಂಜುನಾಥ, ಜಂಟಿ ಕಾರ್ಯದರ್ಶಿ ಕೆ.ಪ್ರಹ್ಲಾದ್ ಮತ್ತಿತರರು ಇದ್ದರು.