ಹೊಸಪೇಟೆ ವಡಕಾರಾಯ ದೇಗುಲದ ಬಳಿ ಭಾನುವಾರ 37ನೇ ರಸ್ತೆ ಸುರಕ್ಷತಾ ಸಪ್ತಾಹದ ನಿಮಿತ್ತ ಆಯೋಜಿಸಿದ ಬೈಕ್ ರ್ಯಾಲಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಪಿ. ಕುಮಾರಸ್ವಾಮಿ ಚಾಲನೆ ನೀಡಿ ಮಾತನಾಡಿದರು. ಎಎಸ್ಪಿ ಮಂಜುನಾಥ, , ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಪ್ರಶಾಂತ್ ನಾಗಲಾಪುರ ಇತರರಿದ್ದರು.
- ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ಸಲಹೆ
ಹೊಸಪೇಟೆ: ಜೀವ ಅಮೂಲ್ಯವಾದುದು, ರಸ್ತೆ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಪಿ. ಕುಮಾರಸ್ವಾಮಿ ಹೇಳಿದರು.
37ನೇ ರಸ್ತೆ ಸುರಕ್ಷತಾ ಸಪ್ತಾಹದ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಜಂಟಿ ಸಹಯೋಗದಲ್ಲಿ ನಗರದ ವಡಕಾರಾಯ ದೇಗುಲದ ಬಳಿ ಭಾನುವಾರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ರಸ್ತೆ ಅಪಘಾತಗಳು ಸಂಭವಿಸಿದಾಗ ಕೇವಲ ವ್ಯಕ್ತಿಯಷ್ಟೇ ಅಲ್ಲ, ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮಗಾಗಿ ಅಲ್ಲದ್ದಿದ್ದರೂ ತಮ್ಮ ಕುಟುಂಬಕ್ಕಾಗಿಯಾದರೂ ಹೆಲ್ಮೆಟ್ ಧರಿಸಬೇಕು. ಸವಾರರು ಕೇವಲ ದಂಡಕ್ಕೆ ಹೆದರಿ ಸಂಚಾರಿ ನಿಯಮ ಪಾಲಿಸುವುದಕ್ಕಿಂತ, ನಮ್ಮ ಜೀವದ ರಕ್ಷಣೆಗಾಗಿ, ಸ್ವಯಂಪ್ರೇರಿತರಾಗಿ ರಸ್ತೆ ಸಂಚಾರಿ ನಿಯಮ ಪಾಲಿಸಬೇಕು ಎಂದರು.