ಹೊಸಪೇಟೆ ಗೃಹರಕ್ಷಕ ದಳದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರಥಮ ಚಿಕಿತ್ಸಾ ಜಾಗೃತಿ ಕಾರ್ಯಾಗಾರದಲ್ಲಿ ತುರ್ತು ಚಿಕಿತ್ಸಾ ತಜ್ಞ ಡಾ.ಶಬ್ಬೀರ್ ಅಹ್ಮದ್ ಮಾತನಾಡಿದರು. ಜಿಲ್ಲಾ ಗೃಹರಕ್ಷಕ ದಳದ ಕಮಾಂಡರ್‌ಗಳಾದ ಎಸ್.ಎಂ.ಗಿರೀಶ್, ಪರಶುರಾಮ್ ನಾಯಕ್, ರೆಡ್‌ಕ್ರಾಸ್ ಸಭಾಧ್ಯಕ್ಷ ರವಿಶಂಕರ್, ಪ್ರಧಾನ ಕಾರ್ಯದರ್ಶಿ ರೇಖಾ ಪ್ರಕಾಶ್, ಪ್ರಮುಖರಾದ ಅನ್ನಪೂರ್ಣ ಸದಾಶಿವ, ಕೆ.ರೆಹಮಾನ್, ಮಹೇಂದ್ರ ಕುಮಾರ್ ಸೋನಿ, ಇತರರಿದ್ದರು. 
ವಿಜಯನಗರ

ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಅಗತ್ಯ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಜಾಗೃತ ಶಿಬಿರದಲ್ಲಿ ತುರ್ತು ಚಿಕಿತ್ಸಾ ತಜ್ಞ ಡಾ.ಶಬ್ಬೀರ್ ಅಹ್ಮದ್ ಕರೆ
ಹೊಸಪೇಟೆ: ರಸ್ತೆ ಅಪಘಾತ, ಆತ್ಮಹತ್ಯೆ ಯತ್ನ, ನೀರಿನಲ್ಲಿ ಮುಳುಗುವಿಕೆ, ಹೃದಯಾಘಾತ, ಬೆಂಕಿ ಅವಘಡ, ಹಾವು ಹಾಗೂ ನಾಯಿ ಕಡಿತದಂತಹ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಯ ಅರಿವು ಜೀವ ಉಳಿಸುತ್ತದೆ ಎಂದು ತುರ್ತು ಚಿಕಿತ್ಸಾ ತಜ್ಞ ಡಾ.ಶಬ್ಬೀರ್ ಅಹ್ಮದ್ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ವಿಜಯನಗರ ಜಿಲ್ಲಾ ಘಟಕದಿಂದ ನಗರದ ಗೃಹರಕ್ಷಕ ದಳದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರಥಮ ಚಿಕಿತ್ಸಾ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅಪಘಾತಕ್ಕೊಳಗಾದವರಿಗೆ ಸಹಾಯ ಮಾಡುವವರಿಗೆ ಕಾನೂನಿನ ರಕ್ಷಣೆ ಇದೆ. ಒಳ್ಳೆಯ ಉದ್ದೇಶದಿಂದ ಪ್ರಥಮ ಚಿಕಿತ್ಸೆ ನೀಡಿದವರನ್ನು ಪೊಲೀಸರು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುವಂತಿಲ್ಲ. ಹೆಸರು, ವಿಳಾಸ ಪಡೆದು ಕಳುಹಿಸಬೇಕು ಎಂದು ನ್ಯಾಯಾಲಯದ ಆದೇಶವಿದೆ ಎಂದರು.
ರಸ್ತೆ ಅಪಘಾತದಲ್ಲಿ ರಕ್ತಸ್ರಾವವಾಗುತ್ತಿದ್ದರೆ ಶುದ್ಧ ಬಟ್ಟೆಯಿಂದ ಒತ್ತಿ ಹಿಡಿಯಬೇಕು. ಕುತ್ತಿಗೆ, ಬೆನ್ನುಮೂಳೆ ಪೆಟ್ಟು ಅನುಮಾನವಿದ್ದರೆ ರೋಗಿಯನ್ನು ಅಲ್ಲಾಡಿಸಬಾರದು. ನೀರಿನಲ್ಲಿ ಮುಳುಗಿದವರನ್ನು ಮೇಲೆತ್ತಿದ ಕೂಡಲೇ ಉಸಿರಾಟ ಪರೀಕ್ಷಿಸಿ ಸಿಪಿಆರ್ ಆರಂಭಿಸಬೇಕು. ಹಾವು ಕಡಿದರೆ ಬಿಗಿಯಾಗಿ ಕಟ್ಟಬಾರದು, ಬ್ಲೇಡ್‌ನಿಂದ ಕೊಯ್ಯಬಾರದು. ನಾಯಿ ಕಡಿತಕ್ಕೆ 15 ನಿಮಿಷ ಸಾಬುನಿನ ನೀರಿನಲ್ಲಿ ತೊಳೆಯಬೇಕು. ಎಂದು ಸಲಹೆ ನೀಡಿದರು.
ಅದಕ್ಕು ಮುನ್ನ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಗೃಹರಕ್ಷಕರಿಗೆ ಹ್ಯಾಂಡ್ಸ್ ಓನ್ಲಿ ಸಿಪಿಆರ್ ತರಬೇತಿ ನೀಡಲಾಯಿತು.