ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಬಳ್ಳಾರಿ ತುಂಗಭದ್ರಾ ರೈತ ಸಂಘದ ನೇತೃತ್ವದಲ್ಲಿ ಹೂಳೆತ್ತುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಮಠಾಧೀಶರಾದ ಪ್ರಭು ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಕೊಟ್ಟೂರು ದೇಶಿಕೇಂದ್ರ ಸ್ವಾಮೀಜಿ, ದರೂರಿನ ಕೊಟ್ಟೂರು ಸ್ವಾಮೀಜಿ, ಕೊಂಚಗೇರಿ ರುದ್ರಪ್ಪ ತಾತನವರ ಮಠದ ಶಿವಪ್ಪ ತಾತನವರು, ಪ್ರಮುಖರಾದ ಪುರುಷೋತ್ತಮ ಗೌಡ, ವೀರಭದ್ರ ನಾಯಕ, ದುರುಗಪ್ಪ ನಾಯಕ ಇತರರಿದ್ದರು. 
ವಿಜಯನಗರ

ಹೂಳು ಜಾತ್ರೆಗೆ ರೈತರಿಂದ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರತಿಭಟನೆ
  • ಮಠಾಧೀಶರಿಂದ ಗಂಗಾಪೂಜೆ
ಹೊಸಪೇಟೆ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ಹೂಳೆತ್ತುವ ಕಾರ್ಯಕ್ಕೆ ಸರ್ಕಾರ ಮುಂದಾಗದ ಹಿನ್ನೆಲೆಯಲ್ಲಿ ರೈತರು ಸ್ವಯಂಪ್ರೇರಿತರಾಗಿ ಹೂಳು ಜಾತ್ರೆಗೆ ಮಂಗಳವಾರ ಚಾಲನೆ ನೀಡಿದ್ದಾರೆ.

ಮಂತ್ರಘೋಷ, ಗಂಗಾ ಪೂಜೆಯೊಂದಿಗೆ ಜೆಸಿಬಿ-ಟ್ರಾಕ್ಟರ್‌ಗಳು ಜಲಾಶಯದ ಹಿನ್ನೀರಿಗೆ ಇಳಿದವು. ತುಂಗಭದ್ರಾ ರೈತ ಸಂಘದ ನೇತೃತ್ವದಲ್ಲಿ ಗುಂಡಾ ಸಸ್ಕೋದ್ಯಾನದ ಬಳಿ ಮಂಗಳವಾರ ಸಾಂಕೇತಿಕ ಕಾರ್ಯ ಆರಂಭವಾಯಿತು. ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಗಂಗಾ ಪೂಜೆ ನೆರವೇರಿಸಿದರು. ಎರಡು ಜೆಸಿಬಿ ಹಾಗೂ 30 ಟ್ರ್ಯಾಕ್ಟರ್‌ಗಳ ಮೂಲಕ ರೈತರು ಹೂಳೆತ್ತುವ ಕೆಲಸ ಆರಂಭಿಸಿದರು.

ಬಳ್ಳಾರಿ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಸದ್ಯ ಬರೋಬ್ಬರಿ 33 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದೆ. ವರ್ಷದಿಂದ ವರ್ಷಕ್ಕೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನೀರು ಸಂಗ್ರಹಣಾ ಸಾಮರ್ಥ್ಯ ಕುಸಿಯುತ್ತಿದೆ. ಈ ಬಗ್ಗೆ ಹೂಳು ತೆಗೆಯುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅದಕ್ಕೆ ಟ್ರ್ಯಾಕ್ಟರ್‌ಗಳನ್ನು ತಂದು ನಾವೇ ಕಾರ್ಯ ಮಾಡುತ್ತಿದ್ದೇವೆ. ಅನ್ನದಾತರಿಂದಾಗುವ ಈ ಕೆಲಸ ಸರ್ಕಾರದಿಂದ ಏಕೆ
ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಸದ್ಯ ಹೂಳೆತ್ತುವ ಮಹತ್ಕಾರ್ಯ ಭರದಿಂದ ಸಾಗುತ್ತಿದ್ದು, ಆಡಳಿತಕ್ಕೆ ನೇರವಾಗಿಯೇ ಸೆಡ್ಡು ಹೊಡೆಯಲಾಗಿದೆ. ಎರಡು ಜೆಸಿಬಿ, 30 ಟ್ರ್ಯಾಕ್ಟರ್ ಮೂಲಕ ಸಾಂಕೇತಿಕ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಇನ್ನಾದರೂ ಸರ್ಕಾರ ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು, ಜಲಾಶಯದ ಹೂಳೆತ್ತುವ ಕಾಯಕಕ್ಕೆ ಮುಂದಾಗಬೇಕು ಎಂದು ರೈತ ಸಂಘ ಒತ್ತಾಯಿಸಿದೆ.

ಸ್ವಾಮೀಜಿಗಳು, ಗಣ್ಯರು ಭಾಗಿ


ಕಾರ್ಯಕ್ರಮದಲ್ಲಿ ಕುರುಗೋಡಿನ ಪ್ರಭು ಸ್ವಾಮೀಜಿ, ಸೋಮಸಮುದ್ರದ ಸಿದ್ದಲಿಂಗ ಸ್ವಾಮೀಜಿ, ಶ್ರೀಧರಗಡ್ಡೆಯ ಕೊಟ್ಟೂರು ದೇಶಿಕೇಂದ್ರ ಸ್ವಾಮೀಜಿ, ದರೂರಿನ ಕೊಟ್ಟೂರು ಸ್ವಾಮೀಜಿ, ಕೊಂಚಗೇರಿ ರುದ್ರಪ್ಪ ತಾತನವರ ಮಠದ ಶಿವಪ್ಪ ತಾತನವರು, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ, ಉಪಾಧ್ಯಕ್ಷ ವೀರಭದ್ರ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರುಗಪ್ಪ ನಾಯಕ ಇತರರಿದ್ದರು.