- ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕೆ
ಹೊಸಪೇಟೆ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಪಯಣ 50 ವರ್ಷ ಪೂರೈಕೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಮೇ 9ರಂದು ಅಭಿಮಾನೋತ್ಸವ ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಗೃಹ ಸಚಿವ ಅಮಿತ್ ಷಾ ಸೇರಿ ನಾಡಿನ ನಾನಾ ಮಠಾಧೀಶರು, ಗಣ್ಯಮಾನ್ಯರು ಭಾಗವಹಿಸಲಿದ್ದಾರೆ ಎಂದರು.
ಚಿತ್ರದುರ್ಗದ ಮದಕರಿ ನಾಯಕ ಪುತ್ಥಳಿ ಥೀಮ್‌ಪಾರ್ಕ್ ಅಪೂರ್ಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ತಾನು ಘೋಷಿಸಿದ ಬಹುತೇಕ ಭರವಸೆ ಈಡೇರಿಸಿಲ್ಲ. ಹಾಗೆ ಲೆಕ್ಕನೋಡಿದರೆ ಕಾಂಗ್ರೆಸ್‌ಗೆ ರಾಜಕಾರಣ ಮಾಡುವ ನೈತಿಕತೆಯೇ ಇಲ್ಲ. ಈ ಹಿಂದೆ ನಾವು ಥೀಮ್‌ಪಾರ್ಕ್ ಭರವಸೆ ನೀಡಿದ್ದೆವು. ಅದು ಅಪೂರ್ಣಗೊಂಡ ಬಗ್ಗೆ ಕೇಂದ್ರ ಸಚಿವ ಅಮಿತ್ ಷಾ ಗಮನಕ್ಕೆ ತರುತ್ತೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಹೈಕಮಾಂಡ್ ಏನು ಹೇಳುತ್ತೋ ಅದನ್ನು ಮಾಡುತ್ತೇವೆ. ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ನಾವು ಬದ್ಧರಿದ್ದೇವೆ ಎಂದ ಅವರು, ರಾಜ್ಯದಲ್ಲಿ ಕುಡಿವ ನೀರು ಸೇರಿ ಜ್ವಲಂತ ಸಮಸ್ಯೆಗಳಿವೆ. ಎಲ್ಲೆಡೆ ಬರಗಾಲ ಛಾಯೆ ಆವರಿಸಿದೆ. ಆದರೆ, ಕಾಂಗ್ರೆಸ್ ನಾಯಕರು ಕುರ್ಚಿ ಉಳಿವಿಗಾಗಿ ಕಳೆದ ಮೂರು ವರ್ಷದಿಂದ ದೆಹಲಿ ದಂಡಯಾತ್ರೆಯಲ್ಲಿ ತೊಡಗಿದ್ದಾರೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.