ಹಗರಿಬೊಮ್ಮನಹಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸಾಮಾಜಿಕ ಪರಿಶೋಧನೆ ಸಭೆಯಲ್ಲಿ ಬಿಇಒ ಎಂ.ಪ್ರಭಾಕರ ಮಾತನಾಡಿದರು.  
ವಿಜಯನಗರ

ಮಕ್ಕಳು ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಿ

ಹಗರಿಬೊಮ್ಮನಹಳ್ಳಿ: ಶಿಕ್ಷಣ ನೀಡಲು ಸರ್ಕಾರ ಸಾಕಷ್ಟು ವ್ಯಯಿಸುತ್ತಿದೆ. ಹಿಂದುಳಿದ ವರ್ಗ ಹಾಗೂ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿದ್ದು, ಮಕ್ಕಳು ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದು ಬಿಇಒ ಎಂ.ಪ್ರಭಾಕರ ಮಾತನಾಡಿ ಹೇಳಿದರು.
ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸಾಮಾಜಿಕ ಪರಿಶೋಧನೆ, ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ್ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ವಿದ್ಯಾರ್ಥಿಗಳು ಹಾಗೂ ಪಾಲಕರ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.
ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಶೌಚಗೃಹಗಳಲ್ಲಿ ಸ್ವಚ್ಛತೆ ಹಾಗೂ ನೀರಿಲ್ಲ. ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು. ಸಂಜೆ 4.30ರ ನಂತರ ಪಟ್ಟಣದ ಬಸ್ ನಿಲ್ದಾಣದಿಂದ ಬಸ್‌ಗಳ ಸಂಚಾರ ಆರಂಭಿಸಬೇಕು. ಇದರಿಂದ ವಿದ್ಯಾರ್ಥಿಗಳು ಗ್ರಾಮೀಣ ಭಾಗಗಳಿಗೆ ಬೇಗ ತೆರಳಲು ಅನುಕೂಲವಾಗಲಿದೆ. ಹಿಂದಿ ವಿಷಯದ ಶಿಕ್ಷಕರಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ದೂರಿದರು.
ಮುಖ್ಯಶಿಕ್ಷಕ ಎಲ್.ಡಿ.ರವಿನಾಯ್ಕ ಮಾತನಾಡಿ, ಶೀಘ್ರದಲ್ಲೇ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗುವುದು ಹಾಗೂ ಇತರ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು. ಹಿಂದಿ ಬಿ.ಇಡಿ ಪದವಿ ಪಡೆದವರು ಬಂದರೆ ಅತಿಥಿ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ ಮಾತನಾಡಿ, ಶಿಕ್ಷಣ ಇಲಾಖೆ ಹಾಗೂ ತಾ.ಪಂ.ನಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.
ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ರಾಜಕುಮಾರನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ, ಕಾರ್ಯಕ್ರಮ ವ್ಯವಸ್ಥಾಪಕಿ ನಿರ್ಮಾಲಾ ಆಚಾರಿ, ಗ್ರಾಮ ಸಂಪನ್ಮೂಲ ವ್ಯಕ್ತಿ ಸಿದ್ದಪ್ಪ ಪೂಜಾರಿ, ಶ್ರೀಧರ ಕವಿಶೆಟ್ಟಿ, ಪಿ.ರೆಹಮಾನ್ ಸಾಬ್, ಕೆ.ಮರಿಯಮ್ಮ, ಎಸ್ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ಮತ್ತಿತರರು ಇದ್ದರು.